ಅಂತರ್ ರಾಷ್ಟ್ರೀಯ ಕ್ರಿಕೆಟ್ ತೊರೆಯಲು ಆರು ಮಂದಿ ಇಂಗ್ಲೆಂಡ್ ಆಟಗಾರರಿಗೆ IPL ಫ್ರಾಂಚೈಸಿಗಳ ಬಹುಕೋಟಿ ಆಫರ್: ವರದಿ

ಹೊಸದಿಲ್ಲಿ: ವರ್ಷಾದ್ಯಂತ ಟಿ-20 ಲೀಗ್ ಪಂದ್ಯಗಳನ್ನು ಆಡುವ ಸಲುವಾಗಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ತೊರೆಯುವಂತೆ ಆರು ಮಂದಿ ಇಂಗ್ಲೆಂಡ್ ಆಟಗಾರರ ಮನವೊಲಿಸಲು ಐಪಿಎಲ್ ಫ್ರಾಂಚೈಸಿಗಳು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ 50 ಲಕ್ಷ ಪೌಂಡ್‌ವರೆಗಿನ ಆಕರ್ಷಕ ವಾರ್ಷಿಕ ಗುತ್ತಿಗೆಯ ಆಫರ್ ನೀಡಿವೆ ಎಂದು ’Times London’ ವರದಿ ಮಾಡಿದೆ.
ಬಹುತೇಕ ಎಲ್ಲ 10 ಐಪಿಎಲ್ ಫ್ರಾಂಚೈಸಿಗಳು ಸಿಪಿಎಲ್ (ವೆಸ್ಟ್‌ಇಂಡೀಸ್), ಎಸ್‌ಎ ಟಿ20 (ದಕ್ಷಿಣ ಆಫ್ರಿಕಾ), ಗ್ಲೋಬಲ್ ಟಿ20 ಲೀಗ್ (ಯುಎಎಇ) ಮತ್ತು ಅಮೆರಿಕದಲ್ಲಿ ನಡೆಯಲಿರುವ ಪ್ರಮುಖ ಲೀಗ್ ಟಿ20 ಪಂದ್ಯಗಳಲ್ಲಿ ತೊಡಗಿಸಿಕೊಂಡಿವೆ. ಆದರೆ ಯಾವ ಫ್ರಾಂಚೈಸಿಗಳು ಈ ಆಫರ್ ನೀಡಿವೆ ಹಾಗೂ ಯಾವ ಆಟಗಾರರು ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿವರಗಳನ್ನು ನೀಡಿಲ್ಲ.
ಮಹತ್ವಾಕಾಂಕ್ಷಿ ಸೌದಿ ಟಿ20 ಲೀಗ್ ಕೂಡಾ ನಡೆಯಲಿದ್ದು, ಇದರಲ್ಲೂ ಕೆಲ ಐಪಿಎಲ್ ಫ್ರಾಂಚೈಸಿಗಳು ಹೂಡಿಕೆ ಮಾಡುವ ನಿರೀಕ್ಷೆ ಇದೆ.
"ಐಪಿಎಲ್ ಫ್ರಾಂಚೈಸಿಗಳು ಆಫರ್ ನೀಡಿದ ಹಿನ್ನೆಲೆಯಲ್ಲಿ ಕೆಲ ಮಂದಿ ಅಂತರರಾಷ್ಟ್ರೀಯ ಸ್ಟಾರ್‌ಗಳು ಸೇರಿದಂತೆ ಕನಿಷ್ಠ ಆರು ಮಂದಿ ಇಂಗ್ಲಿಷ್ ಆಟಗಾರರ ಜತೆ ಆರಂಭಿಕ ಸುತ್ತಿನ ಮಾತುಕತೆಗಳು ನಡೆದಿದೆ. ಇಸಿಬಿ ಬದಲಾಗಿ ಭಾರತೀಯ ತಂಡಗಳು ಈ ಆಟಗಾರರ ಪ್ರಮುಖ ಉದ್ಯೋಗದಾತರಾಗಲು ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ" ಎಂದು ಟೈಮ್ಸ್ ವರದಿ ಹೇಳಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ 12 ತಿಂಗಳ ಫ್ರಾಂಚೈಸಿ ಗುತ್ತಿಗೆಗಳ ಬಗ್ಗೆ ವಿಶ್ವಾದ್ಯಂತ ಆಟಗಾರರ ಸಂಘಟನೆಗಳಲ್ಲಿ ಚರ್ಚೆ ಆರಂಭವಾಗಿದೆ. ಪ್ರಮುಖ ಫುಟ್ಬಾಲ್ ತಾರೆಯರ ಮಾದರಿಯಲ್ಲಿ ಪ್ರಾಥಮಿಕವಾಗಿ ಈ ಆಟಗಾರರು ಫ್ರಾಂಚೈಸಿ ತಂಡಗಳ ಜತೆ ಒಪ್ಪಂದ ಮಾಡಿಕೊಳ್ಳುತ್ತಾರೆ ಹಾಗೂ ಅವರನ್ನು ಅಂತರರಾಷ್ಟ್ರೀಯ ಕರ್ತವ್ಯಕ್ಕೆ ಆಯಾ ಪ್ರಾಂಚೈಸಿಗಳು ಬಿಡುಗಡೆ ಮಾಡುತ್ತಾರೆ.
"ಒಂದು ಮೂಲದ ಪ್ರಕಾರ, ವರ್ಷಾಂತ್ಯದ ವೇಳೆಗೆ ಈ ಗುತ್ತಿಗೆ ಒಪ್ಪಂದಗಳು ಏರ್ಪಡುವ ನಿರೀಕ್ಷೆ ಇದೆ. ಟಿ20 ಕ್ರಿಕೆಟ್ ಮತ್ತಷ್ಟು ಗಟ್ಟಿಯಾಗಲಿದೆ ಮತ್ತು ಟಿ10 ಪರಿಕಲ್ಪನೆ ಕೂಡಾ ಜನಪ್ರಿಯವಾಗುತ್ತಿದೆ" ಎಂದು ವರದಿ ವಿವರಿಸಿದೆ.
ಸಕ್ರಿಯ ಗುತ್ತಿಗೆ ಪಡೆದ ಆಟಗಾರ ವರ್ಷದಲ್ಲಿ ಆಡಬಹುದಾದ ಗರಿಷ್ಠ ಲೀಗ್ ಪಂದ್ಯಗಳಿಗೆ ಮಿತಿ ವಿಧಿಸುವ ಬಗ್ಗೆ ಐಸಿಸಿ ಚಿಂತನೆ ನಡೆಸಿದ್ದರೆ, ಹಲವು ಮಂದಿ ಯುವ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ಅಥವಾ ತಮ್ಮ ಪ್ರಧಾನ ಗುತ್ತಿಗೆಯನ್ನು ತೊರೆದು ಮುಕ್ತ ಆಟಗಾರರಾಗುವ ಸಾಧ್ಯತೆಯೂ ಇದೆ. ಇಂಥ ಪರಿಸ್ಥಿತಿಯಲ್ಲಿ ಎದುರಾಗಬಹುದಾದ ಏಕೈಕ ತಡೆ ಅಂಶವೆಂದರೆ ಆಯಾ ದೇಶದ ಕ್ರಿಕೆಟ್ ಮಂಡಳಿಗಳಿಂದ ಪಡೆಯಬೇಕಾಗಿರುವ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ಎನ್ನಲಾಗಿದೆ.