ಕಾರ್ಕಳದಲ್ಲಿ ಕಾಂಗ್ರೆಸ್ ಗೆಲುವು ಶತಃಸಿದ್ಧ : ಮಾಜಿ ಸಿಎಂ ವೀರಪ್ಪ ಮೊಯ್ಲಿ

ಕಾರ್ಕಳ: ಕಾರ್ಕಳಕ್ಕೂ ನನಗೂ ತಾಯಿ ಮತ್ತು ಮಗುವಿನ ಸಂಬಂಧ, ಇಲ್ಲಿಯ ಜನರು ಜಾತಿ ಮತ ಭೇದವಿಲ್ಲದೇ ನನ್ನನ್ನು ಬೆಳೆಸಿದ್ದಾರೆ. ಪಕ್ಷ ಎನ್ನುವುದು ನಮ್ಮ ತಾಯಿ ಇದ್ದಂತೆ, ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲಲೇಬೇಕು, ಈ ನಿಟ್ಟಿನಲ್ಲಿ ಉದಯ ಶೆಟ್ಟಿಯವರ ಪರವಾಗಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ ವೀರಪ್ಪ ಮೊಯ್ಲಿ ಹೇಳಿದರು.
ಅವರು ಕಾರ್ಕಳ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೂ ಮಸೂದೆಯಯ ಮೂಲಕ ಲಕ್ಷಾಂತರ ಬಡ ಗೇಣಿದಾರರ ಪರವಾಗಿ ಹೋರಾಟ ಮಾಡಿ ಭೂಮಿ ಇಲ್ಲದವರಿಗೆ ಭೂಮಿ ಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಅಕ್ರಮ ಸಕ್ರಮದ ಮೂಲಕ ಕೃಷಿಕರಿಗೆ ಜಮೀನು ಮಂಜೂರಾತಿ, ಕರ್ನಾಟಕದಲ್ಲೇ ಮೊದಲ ಬಾರಿಗೆ ಕಾರ್ಕಳ ನಗರಕ್ಕೆ ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ಮುಂಡ್ಲಿ ಬಲ್ಮಗುಂಡಿಯಿಂದ ಪುರಸಭೆಗೆ ನೀರು ಪೂರೈಸುವ ಯೋಜನೆ, ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆ, ಹೆಬ್ರಿ ತಾಲೂಕು ರಚನೆ ಸೇರಿದಂತೆ ಹಲವಾರು ಯೋಜನೆಗಳು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದರು.
ಉತ್ಸವಗಳಿಂದ ಕಾರ್ಕಳದ ಜನರ ಬದುಕನ್ನು ಕಟ್ಟಲು ಸಾಧ್ಯವಿಲ್ಲ, ಜನರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಹಾಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುವಲ್ಲಿ ಸುನಿಲ್ ಕುಮಾರ್ ವಿಫಲರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ,ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಮುಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಉದಯ ಶೆಟ್ಟಿಯವರನ್ನು ಕಣಕ್ಕಿಳಿಸಿದೆ. ಅವರ ಪರವಾಗಿ ಮುಂದಿನ ದಿನಗಳಲ್ಲಿ ಪ್ರಚಾರದಲ್ಲಿ ಭಾಗವಹಿಸುವುದಾಗಿ ಹೇಳಿದ ಮೊಯ್ಲಿ, ಕಾರ್ಕಳದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಶತಃಸಿದ್ಧ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಕಳದ ಎಣ್ಣೆಹೊಳೆಯ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದ್ದು,ಈ ಯೋಜನೆಯಿಂದ ಕಾರ್ಕಳಕ್ಕೆ ಒಂದು ಹನಿ ನೀರು ಬಳಕೆಯಾಗಿಲ್ಲ,ಈ ಯೋಜನೆ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದ್ದು, ಎಣ್ಣೆಹೊಳೆಯ ಪಟ್ಟಿಬಾವು ಎಂಬಲ್ಲಿ ಅಣೆಕಟ್ಟು ನಿರ್ಮಿಸಿದ್ದಲ್ಲಿ ಈ ಯೋಜನೆ ಸಫಲವಾಗುತ್ತಿತ್ತು,ಕೇವಲ ಶಾಸಕರು ಹಾಗೂ ಗುತ್ತಿಗೆದಾರರಿಗೆ ಕಮಿಷನ್ ಹೊಡೆಯಲು ಮಾಡಿದ ಯೋಜನೆ ಇದಾಗಿದೆ ಎಂದು ಮೊಯ್ಲಿ ಆರೋಪಿಸಿದರು.
ಕರಾವಳಿ ಜಿಲ್ಲೆಗಳು ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪಶ್ಚಿಮವಾಹಿನಿ ಮೂಲಕ ಪ್ರಮುಖ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಪೂರೈಸುವ ಯೋಜನೆ ಕಾರ್ಯಗತಗೊಳಿಸಲಾಗುವುದೆಂದರು.
ಸಿಇಟಿ ಜಾರಿಗೊಳಿಸುವ ಮೂಲಕ ಸಾವಿರಾರು ರೈತರ,ಬಡವರ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್ ಪದವಿ ಪಡೆದು ಉದ್ಯೋಗ ಪಡೆಯುವಂತಾಗಿದೆ.ಆದರೆ ನೀಟ್ ಯೋಜನೆಯಿಂದ ಶ್ರೀಮಂತರ ಮಕ್ಕಳಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಆದರೆ ಬಿಜೆಪಿ ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ಬಡವರ ಮಕ್ಕಳ ಉದ್ಯೋಗದ ಕನಸಿಗೆ ಕೊಳ್ಳಿಯಿಟ್ಟಂತಾಗಿದೆ ಎಂದರು.
ಮುತಾಲಿಕ್ ಕಾಂಗ್ರೆಸ್ ಪಕ್ಷದ ಬಿ ಟೀಮ್ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಮೊಯ್ಲಿ, ಮುತಾಲಿಕ್ ಹಾಗೂ ಸುನಿಲ್ ಕುಮಾರ್ ನಡುವೆ ಯಾವ ಹೊಂದಾಣಿಕೆಯಿದೆ ಎಂದು ನಮಗೆ ಗೊತ್ತಿಲ್ಲ,ನಮಗೂ ಮುತಾಲಿಕ್ ಅವರಿಗೂ ಯಾವ ಸಂಬಂಧವೂ ಇಲ್ಲ, ಮುತಾಲಿಕ್ ಅವರು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಸುನಿಲ್ ಕುಮಾರ್ ಉತ್ತರ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಡಿ.ಆರ್ ರಾಜು, ಸುರೇಂದ್ರ ಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ,ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಬಾಯರಿ, ಪ್ರಭಾಕರ ಬಂಗೇರ,ಶುಭದ್ ರಾವ್ ಮುಂತಾದವರು ಉಪಸ್ಥಿತರಿದ್ದರು