ಬಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧೆ-ಅಶೋಕ್ ರೈ

ಪುತ್ತೂರು: ನಾನು ಹಣಮಾಡಬೇಕು ಎಂಬ ಉದ್ದೇಶಕ್ಕೆ ರಾಜಕೀಯಕ್ಕೆ ಬಂದಿಲ್ಲ, ನನಗೆ ರಾಜಕೀಯಕ್ಕೆ ಬಂದು ಹಣ ಮಾಡಬೇಕೆಂಬ ಆಸೆಯೂ ಇಲ್ಲ. ಕಳೆದ 22 ವರ್ಷಗಳಿಂದ ಸಮಾಜ ಸೇವೆ ಮಾಡಿದ ಸಾರ್ಥಕ್ಯವಿದೆ. ಪುತ್ತೂರು ಬಿಜೆಪಿಗರು ಅಕ್ರಮ-ಸಕ್ರಮ ಕಡತ ವಿಲೇವಾರಿಗೂ ಹಣ ಕೇಳುತ್ತಿದ್ದರು. ಇದೇ ಕಾರಣಕ್ಕೆ ಬಡವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಬಿಟ್ಟು ಹೊರ ಬಂದು ಕಾಂಗ್ರೆಸ್‍ನಿಂದ ಸ್ಪರ್ಧೆಗಿಳಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬೆಟ್ಟಂಪಾಡಿ ಗ್ರಾಮದ ಇರ್ದೆ ಗಾಂಧಿ ಮೈದಾನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜಕೀಯ ಲಾಭಕ್ಕಾಗಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿಲ್ಲ. ನನ್ನ ಕಚೇರಿಗೆ ಸಾವಿರಕ್ಕೂ ಮಿಕ್ಕಿ ಬಡವರು ಅಕ್ರಮಸಕ್ರಮ, 94 ಸಿ ಅರ್ಜಿಯನ್ನು ನೀಡಿದ್ದರು. ಹೇಗಾದರೂ ಮಾಡಿ ನಮಗೆ ಈ ಅರ್ಜಿಯನ್ನು ವಿಲೇವಾರಿ ಮಾಡಿಸಿಕೊಡಿ, ನಮ್ಮಲ್ಲಿ ಹಣವಿಲ್ಲ, ಹಣ ಕೊಡದೇ ಇದ್ದರೆ ನಮ್ಮ ಅರ್ಜಿಗಳು ತಿರಸ್ಕಾರವಾಗಬಹುದು ಎಂದು ಕೇಳಿಕೊಂಡಿದ್ದರು. ಕಚೇರಿಗೆ ಬಂದ ಅರ್ಜಿಗಳೆಲ್ಲವೂ ಬಡವರದ್ದೇ ಆಗಿದ್ದವು. ನಾನು ಬಿಜೆಪಿಯಲ್ಲಿದ್ದ ಕಾರಣ ಪುತ್ತೂರಿನ ಶಾಸಕರು, ಬಿಜೆಪಿ ಅಧ್ಯಕ್ಷರಲ್ಲಿ ವಿಷಯ ತಿಳಿಸಿದ್ದೆ. ಆದರೆ ನಾನು ಕಳುಹಿಸಿಕೊಟ್ಟ ಒಂದೇ ಒಂದು ಅರ್ಜಿಯನ್ನು ಪರಿಗಣಿಸಿರಲಿಲ್ಲ. ಇದೇ ವಿಚಾರವನ್ನು ನಾನು ಪಕ್ಷದ ವೇದಿಕೆಯಲ್ಲಿ ತಿಳಿಸಿದ್ದೆ, ಅ ವೇಳೆ ಮಾಧ್ಯಮದವರೂ ಸಭೆಯಲ್ಲಿದ್ದರು. ಮಾಧ್ಯಮದ ಮುಂದೆ ವಿಚಾರ ತಿಳಿಸಿದ್ದರಿಂದ ಬಿಜೆಪಿ ಅಧ್ಯಕ್ಷರು ನನ್ನ ಮನ ನೋಯಿಸುವಂತೆ ಮಾತನಾಡಿದರು. ಬಡವರ ಅರ್ಜಿಯನ್ನು ತಿರಸ್ಕಾರ ಮಾಡಿದ ಘಟನೆ ನನಗೆ ಆಘಾತವನ್ನುಂಟು ಮಾಡಿತ್ತು. ಇಂಥ ಪಕ್ಷದಲ್ಲಿ ಒಂದು ಕ್ಷಣವೂ ನಾನಿರಲಾರೆ ಎಂದು ಬಿಜೆಪಿಯಿಂದ ಒಂದು ಕಾಲು ಆವಾಗಲೇ ಹೊರಗಿಟ್ಟು ಆ ಬಳಿಕ ನಾನು ಪೂರ್ತಿಯಾಗಿ ಹೊರಬಂದೆ. ನನಗೆ ಈ ಬಾರಿ ಆಶೀರ್ವಾದ ಮಾಡಿ ಶಾಸಕನಾದ ಒಂದೇ ತಿಂಗಳಲ್ಲಿ ತಿರಸ್ಕಾರ ಮಾಡಿದ ಅರ್ಜಿಗಳು ಸೇರಿದಂತೆ ತಾಲೂಕಿನ ಎಲ್ಲಾ ಅಕ್ರಮ ಸಕ್ರಮ, 94 ಸಿ ಫೈಲುಗಳನ್ನು ಇತ್ಯರ್ಥ ಮಾಡಿ ಹಕ್ಕುಪತ್ರವನ್ನು ಅರ್ಜಿದಾರರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಬಡವರ ರಕ್ತ ಹೀರುವ ಕೆಲಸವನ್ನು ಯಾರೂ ಮಾಡಬರದು. ಜನಪ್ರತಿನಿಧಿಯಾದವರು ಜನರ ಸೇವೆಯನ್ನು ಮಾಡಬೇಕೇ ಹೊರತು ಹಣ ಮಾಡುವ ಉದ್ದೇಶ ಇಟ್ಟುಕೊಳ್ಳಬಾರದು. ಬಡವರ ಶಾಪ ಬಹುಬೇಗನೇ ತಟ್ಟುತ್ತದೆ. ನನ್ನ ಕಚೇರಿಗೆ ಬಂದ ನೂರಾರು ಬಡವರು ಬಿಜೆಪಿಗರ ಹಣದ ದಾಹಕ್ಕೆ ಶಾಫ ಹಾಕಿ ಹೋಗಿದ್ದರು, ಬಿಜೆಪಿಉಗೆ ಬಡವನ ಶಾಪ ತಟ್ಟಿದೆ ಎಂದು ಹೇಳಿದರು. ನನ್ನನ್ನು ನಂಬಿ ನಾನು ಇದುವರೆಗೂ ಚುನಾವಣಾ ಭಾಷಣದಲ್ಲಿ ಹೇಳಿದ ಎಲ್ಲಾ ವಿಚಾರಗಳನ್ನು ಮಾಡಿಯೇ ಮಾಡುತ್ತೇನೆ, ನಾನು ಹೇಳಿದ ಕೆಲಸ ಮಾಡದೇ ಇದ್ದರೆ ರಸ್ತೆಯಲ್ಲಿ ಹೋಗುವಾಗ ಕಾರಿಗೆ ಅಡ್ಡ ನಿಂತು ನನ್ನನ್ನು ಪ್ರಶ್ನಿಸಿ ಎಂದು ಮನವಿ ಮಾಡಿಕೊಂಡರು.
ಇದೇ ಸಂಧರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ವೇದಿಕೆಯಲ್ಲಿ ಕಾವು ಹೇಮನಾಥ ಸೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಹಿರಿಯ ಕಾಂಗ್ರೆಸ್ಸಿಗ ದೇವಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ಸದಾಶಿವ ರೈ ವಂದಿಸಿದರು.