ಬಿಜೆಪಿ ವಾರಂಟಿಯೂ ಮುಗಿದಿದೆ: ಸಿದ್ದರಾಮಯ್ಯ ತಿರುಗೇಟು

ರಾಯಚೂರು, ಎ. 27: ‘ರಾಜ್ಯ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳ ಪೈಕಿ ಶೇ. 10ರಷ್ಟನ್ನು ಈಡೇರಿಸಿಲ್ಲ. ಹೀಗಾಗಿ ಬಿಜೆಪಿ ವಾರಂಟಿಯೂ ಮುಗಿದಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಗುರುವಾರ ಜಿಲ್ಲೆಯ ಮಾನ್ವಿ ಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಪರವಾಗಿ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬರಗಾಲ, ಪ್ರವಾಹ ಬಂದಾಗ ಪ್ರಧಾನಿ ಮೋದಿ ಬರಲಿಲ್ಲ. ಇದೀಗ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಬಂದು ಬರಿ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವವರು ಮೋದಿಯವರು. ನಾವು ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದಿಲ್ಲ’ ಎಂದು ನುಡಿದರು.
ವರುಣಾದಲ್ಲಿ ತಮ್ಮ ಸೊಸೆ ಚುನಾವಣಾ ಪ್ರಚಾರ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಅವರು ನನ್ನ ಪರ ಏಕೆ ಪ್ರಚಾರ ಮಾಡಬಾರದು. ನಮ್ಮ ಪರವಾಗಿ ಪ್ರಚಾರ ಮಾಡಿದರೆ ತಪ್ಪೇನು? ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಸಿ ಕಣ್ಣೀರು ಹಾಕಿದ್ದು, ಶೆಟ್ಟರ್, ಸವದಿಗೆ ಟಿಕೆಟ್ ಕೊಡದೆ ಲಿಂಗಾಯತರಿಗೆ ಅವಮಾನ ಮಾಡಿದ್ದು ನಾವಲ್ಲ. ಬಿಜೆಪಿಗೆ ನಡುಕು ಆರಂಭವಾಗಿದ್ದು, ಕಾಂಗ್ರೆಸ್ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.







