ಕುಸ್ತಿಪಟುಗಳು ಬೀದಿಗಳಲ್ಲಿ ಪ್ರತಿಭಟನೆ ನಡೆಸುವುದು ಅಶಿಸ್ತಿಗೆ ಸಮ, ಭಾರತದ ವರ್ಚಸ್ಸಿಗೆ ಧಕ್ಕೆ: ಪಿ.ಟಿ. ಉಷಾ
ಐಒಎ ಅಧ್ಯಕ್ಷರಿಂದ ಇಂತಹ ಪ್ರತಿಕ್ರಿಯೆ ನಾವು ನಿರೀಕ್ಷಿಸಿರಲಿಲ್ಲ :ಬಜರಂಗ್ ಪುನಿಯಾ

ಹೊಸದಿಲ್ಲಿ, ಎ.27: ಕುಸ್ತಿಪಟುಗಳು ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಅಶಿಸ್ತಿನ ವರ್ತನೆಯಾಗಿದ್ದು, ಇದು ದೇಶದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ)ಅಧ್ಯಕ್ಷೆ ಪಿ.ಟಿ. ಉಷಾ( PT Usha )ಗುರುವಾರ ಪ್ರತಿಭಟನಾನಿರತ ಕುಸ್ತಿಪಟುಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳಿಗ ಗುರಿಯಾಗಿರುವ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮತ್ತೆ ಆರಂಭವಾಗಿರುವ ಪ್ರತಿಭಟನೆಯಲ್ಲಿ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಕೂಡ ಭಾಗವಹಿಸಿದ್ದಾರೆ.
"ಕುಸ್ತಿಪಟುಗಳು ಬೀದಿಗಳಲ್ಲಿ ಪ್ರತಿಭಟನೆ ನಡೆಸುವುದು ಅಶಿಸ್ತಿಗೆ ಸಮ. ಇದು ಭಾರತದ ವರ್ಚಸ್ಸಿಗೆ ಕಳಂಕ ತರುತ್ತಿದೆ'' ಎಂದು ಐಒಎ ಕಾರ್ಯಕಾರಿ ಸಮಿತಿ ಸಭೆ ನಂತರ ಉಷಾ ಸುದ್ದಿಗಾರರಿಗೆ ತಿಳಿಸಿದರು.
ಐಒಎ ಅಧ್ಯಕ್ಷರಿಂದ ಇಂತಹ ಕಠಿಣ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ . ಏಕೆಂದರೆ ನಾವು ಅವರಿಂದ ಬೆಂಬಲವನ್ನು ನಿರೀಕ್ಷಿಸಿದ್ದೇವೆ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಶೂಟರ್ ಸುಮಾ ಶಿರೂರ್, ಭಾರತದ ವುಶು ಅಸೋಸಿಯೇಶನ್ ಅಧ್ಯಕ್ಷ ಭೂಪೇಂದ್ರ ಸಿಂಗ್ ಹಾಗೂ ಇನ್ನೂ ಹೆಸರಿಸದ ನಿವೃತ್ತಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಡಬ್ಲುಎಫ್‌ಐನ ವ್ಯವಹಾರಗಳನ್ನು ನಡೆಸಲು ಮೂವರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಐಒಎ ರಚಿಸಿದೆ.