ಸುಡಾನ್: 20,000 ಪ್ರಜೆಗಳು ನೆರೆದೇಶಕ್ಕೆ ಪರಾರಿ

ಖಾರ್ಟಮ್, ಎ.27: ಎಪ್ರಿಲ್ ಮಧ್ಯಭಾಗದಿಂದ ಸಂಘರ್ಷ ಭುಗಿಲೆದ್ದ ಬಳಿಕ ಸುಮಾರು 20,000 ಸುಡಾನ್ ಪ್ರಜೆಗಳು ನೆರೆದೇಶವಾದ ಚಾಡ್ ಗೆ ಓಡಿಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಸುಡಾನ್ನಿಂದ ಸುಡಾನ್ ಗೆ ಬಂದು ತಾತ್ಕಾಲಿಕ ಶಿಬಿರದಲ್ಲಿ ನೆಲೆಸಿದ್ದ ಸುಮಾರು 4,000 ದಕ್ಷಿಣ ಸುಡಾನ್ನ ನಿರಾಶ್ರಿತರು ಅನಿವಾರ್ಯವಾಗಿ ತಮ್ಮ ದೇಶಕ್ಕೆ ಮರಳಿದ್ದಾರೆ. ಈ ಮಧ್ಯೆ, ಸುಡಾನ್ ನಲ್ಲಿ ಜಾರಿಯಲ್ಲಿರುವ ತಾತ್ಕಾಲಿಕ ಕದನ ವಿರಾಮದ ಪ್ರಯೋಜನ ಪಡೆದಿರುವ ಹಲವು ದೇಶಗಳು ತಮ್ಮ ಪ್ರಜೆಗಳನ್ನು ತೆರವುಗೊಳಿಸುವ ಕಾರ್ಯಕ್ರಮ ಮುಂದುವರಿಸಿದ್ದಾರೆ.
ಬ್ರಿಟನ್, ಅಮೆರಿಕ, ಜಪಾನ್, ಸ್ವಿಝರ್ಲ್ಯಾಂಡ್ ದೇಶಗಳು ತಮ್ಮ ನಾಗರಿಕರನ್ನು ತೆರವುಗೊಳಿಸುವಾಗ ಮಹಿಳೆಯರು ಮತ್ತು ಮಕ್ಕಳಿಗೆ ಮೊದಲ ಆದ್ಯತೆ ನೀಡುವುದಾಗಿ ಘೋಷಿಸಿವೆ. ಡೆನ್ಮಾರ್ಕ್ ಸುಮಾರು 100 ಪ್ರಜೆಗಳನ್ನು ಸ್ಥಳಾಂತರಿಸಿದೆ. ಮಂಗಳವಾರದಿಂದ ಗುರುವಾರದವರೆಗೆ ಸುಮಾರು 800 ಪ್ರಜೆಗಳನ್ನು ಸಮುದ್ರದ ಮೂಲಕ ಸ್ಥಳಾಂತರಿಸಿರುವುದಾಗಿ ಚೀನಾ ಘೋಷಿಸಿದೆ. ತೆರವು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸುಮಾರು 200 ಯೋಧರನ್ನು ಸುಡಾನ್ನಲ್ಲಿ ನಿಯೋಜಿಸುವುದಾಗಿ ಕೆನಡಾ ಹೇಳಿದೆ.
ಭಾರತ ಇದುವರೆಗೆ ಒಟ್ಟು 670 ಪ್ರಜೆಗಳನ್ನು ಸುಡಾನ್ ನಿಂದ ಸ್ಥಳಾಂತರಿಸಿದೆ. ಕದನ ವಿರಾಮ ಅಂತ್ಯಗೊಳ್ಳುವ ಮುನ್ನ ಇನ್ನಷ್ಟು ನಾಗರಿಕರನ್ನು ತೆರವುಗೊಳಿಸಲು ಉದ್ದೇಶಿಸಲಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.







