ಪಾಕಿಸ್ತಾನ: ರೈಲು ಬೋಗಿಯಲ್ಲಿ ಬೆಂಕಿ; ಕನಿಷ್ಟ 7 ಮಂದಿ ಮೃತ್ಯು

ಇಸ್ಲಮಾಬಾದ್, ಎ.27: ದಕ್ಷಿಣ ಪಾಕಿಸ್ತಾನದಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯಲ್ಲಿ ಬೆಂಕಿ ದುರಂತ ಸಂಭವಿಸಿ ಕನಿಷ್ಟ 7 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಕರಾಚಿಯ ಉತ್ತರಕ್ಕೆ ಸುಮಾರು 500 ಕಿ.ಮೀ ದೂರವಿರುವ ಖಾರಿಪುರ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಕರಾಚಿಯಿಂದ ಲಾಹೋರ್ಗೆ ತೆರಳುತ್ತಿದ್ದ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಭಯಗೊಂಡ ಮಹಿಳೆಯೊಬ್ಬಳು ರೈಲಿನ ಕಿಟಕಿಯಿಂದ ಹೊರಹಾರಿದ ಕಾರಣ ಗಾಯಗೊಂಡು ಮೃತಪಟ್ಟಿದ್ದರೆ, ಇತರ ಕನಿಷ್ಟ 7 ಮಂದಿ ಬೆಂಕಿಯಲ್ಲಿ ಸಜೀವ ದಹನಗೊಂಡರು. ಬಳಿಕ ಬೆಂಕಿ ಇತರ ಬೋಗಿಗಳಿಗೂ ಹಬ್ಬಿದೆ. ಬೆಂಕಿ ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ, ಬಡ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭ ಸಣ್ಣ ಗ್ಯಾಸ್ ಸ್ಟವ್ ಬಳಸಿ ತಮ್ಮ ಆಹಾರವನ್ನು ಸ್ವತಃ ತಯಾರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಮಧ್ಯೆ, ಗುರುವಾರ ಗಲಭೆಗ್ರಸ್ತ ಬಲೂಚಿಸ್ತಾನ ಪ್ರಾಂತದ ಖುಜ್ದಾರ್ ಜಿಲ್ಲೆಯಲ್ಲಿ ರಸ್ತೆ ಬದಿ ಪೊಲೀಸ್ ವಾಹನವನ್ನು ಗುರಿಯಾಗಿಸಿ ಇರಿಸಿದ್ದ ಬಾಂಬ್ ಸ್ಫೋಟಗೊಂಡಾಗ ಸ್ಥಳೀಯ ಪೊಲೀಸ್ ಮುಖ್ಯಸ್ಥರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.