ಸರ್ಕಾರ ನಮ್ಮ ಅಹವಾಲು ಸ್ವೀಕರಿಸುತ್ತಿಲ್ಲ: ಕುಸ್ತಿಪಟು ಬಜರಂಗ್ ಪುನಿಯಾ

ಹೊಸದಿಲ್ಲಿ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಮ್ಮ ಸಮಸ್ಯೆಗಳನ್ನು ಸರ್ಕಾರ ಇನ್ನೂ ಪರಿಹರಿಸಿಲ್ಲ ಎಂದು ಗುರುವಾರ ಪ್ರತಿಪಾದಿಸಿದ್ದಾರೆ.
ಕ್ರೀಡಾ ಸಚಿವರು ‘ಕೆಲವು ನಿಮಿಷಗಳ ಕಾಲ’ ಮಾತ್ರ ಅಥ್ಲೀಟ್‌ಗಳೊಂದಿಗೆ ಕುಳಿತುಕೊಂಡಿದ್ದರು ಎಂದು ಹಿರಿಯ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.
ಸರ್ಕಾರವು 12 ಗಂಟೆಗಳ ಕಾಲ ಕುಸ್ತಿಪಟುಗಳ ಸಮಸ್ಯೆಗಳನ್ನು ಆಲಿಸಿದ್ದು, ಸಮಿತಿಯನ್ನು ರಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಆರೋಪಗಳು ಬಂದಿವೆ.
"ಕ್ರೀಡಾ ಸಚಿವರು ಕೆಲವೇ ನಿಮಿಷಗಳ ಕಾಲವಷ್ಟೇ ಕ್ರೀಡಾಪಟುಗಳೊಂದಿಗೆ ಕುಳಿತುಕೊಂಡಿದ್ದಾರೆ” ಎಂದು ಪೂನಿಯಾ ಹೇಳಿದ್ದಾರೆ. ಅಲ್ಲದೆ, ನಾವು ಇತ್ತೀಚಿನ ದಿನಗಳಲ್ಲಿ ಅನುರಾಗ್ ಠಾಕೂರ್ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಅದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅನುರಾಗ್ ಠಾಕೂರ್, “ಜಂತರ್ ಮಂತರ್‌ನಲ್ಲಿ ಕೆಲವು ಕುಸ್ತಿಪಟುಗಳು ಪ್ರತಿಭಟನೆಗೆ ಕುಳಿತಿದ್ದಾರೆ. ನಾನು ಅವರೊಂದಿಗೆ 12 ಗಂಟೆಗಳ ಕಾಲ ಕಳೆದಿದ್ದೇನೆ, ಮೊದಲ ದಿನ ಏಳು ಗಂಟೆ ಹಾಗೂ ಮರುದಿನ ಐದು ಗಂಟೆಗಳ ಕುಳಿತು ಅವರ ಅಹವಾಲು ಸ್ವೀಕರಿಸಿದ್ದೇನೆ, ಅದರ ಬಳಿಕ ಸಮಿತಿ ರಚಿಸಿದ್ದೇವೆ” ಎಂದು ಹೇಳಿದ್ದರು.







