ಸಿದ್ದರಾಮನಹುಂಡಿಯಲ್ಲಿ ವಾಹನ ಢಿಕ್ಕಿಯಿಂದಾದ ಜಗಳಕ್ಕೆ ಬಿಜೆಪಿಯಿಂದ ರಾಜಕೀಯ ಬಣ್ಣ: ಶಾಸಕ ಯತೀಂದ್ರ ಆರೋಪ

ಮೈಸೂರು: 'ವರುಣಾ ಕ್ಷೇತ್ರದ ಸಿದ್ದರಾಮನಹುಂಡಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಢಿಕ್ಕಿಯಿಂದಾಗಿ ಜಗಳ ನಡೆದಿದೆ. ಆದರೆ ಬಿಜೆಪಿ ಅವರು ಇದಕ್ಕೆ ರಾಜಕೀಯ ಬಣ್ಣ ಬಳಿದು ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅವರು ಗಲಭೆ ಮಾಡಿಸಲು ನಿಸ್ಸೀಮರು' ಎಂದು ಕಿಡಿಕಾರಿದರು.
'ಬಿಜೆಪಿ ಹಸಿ ಸುಳ್ಳು ಹೇಳುತ್ತಾ ದ್ಚೇಷ ತಂದು ಹಾಕಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ತಂತ್ರ ಮಾಡುತ್ತಿದೆ. ಅವರು ಎಷ್ಟೇ ಪ್ರಚೋದನೆ ಮಾಡಿದರೂ ಕಾಂಗ್ರೆಸ್ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ರೀತಿ ಕಾರ್ಯತಂತ್ರ ಮಾಡುತ್ತಿದೆ' ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.
ಸಿದ್ದರಾಮಯ್ಯ ಸಹೋದರರ ಮಕ್ಕಳ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಗಲಾಟೆ ವೇಳೆ ಸಿದ್ದರಾಮಯ್ಯ ಕುಟುಂಬದವರು ಯಾರೂ ಅಲ್ಲಿ ಇರಲಿಲ್ಲ. ನಮ್ಮ ಸಂಬಂಧಿಕರ ಮನೆ ಮುಂದೆ ಘಟನೆ ಆಗಿದೆ ಅಷ್ಟೇ. ಆದರೂ ದುರುದ್ದೇಶದಿಂದ ನಮ್ಮ ಕುಟುಂಬದ ಸದಸ್ಯರ ಮೇಲೆ ದೂರು ನೀಡಿದ್ದಾರೆ. ಅವರು ಎಷ್ಟೇ ಪ್ರಚೋದನೆ ಮಾಡಿದರು ಪ್ರಚೋದನೆಗೆ ಒಳಗಾಗಬೇಡಿ' ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.







