ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ನಟ ಶಿವರಾಜ ಕುಮಾರ್ ಪತ್ನಿ ಗೀತಾ

ಬೆಂಗಳೂರು, ಎ.28: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರಿ ಹಾಗೂ ನಟ ಶಿವರಾಜ ಕುಮಾರ್ ಅವರ ಪತ್ನಿ ಗೀತಾ ಶಿವರಾಜ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಗೀತಾ ಶಿವರಾಜ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಗೀತಾ ಸಹೋದರ ಹಾಗೂ ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಧು ಬಂಗಾರಪ್ಪ, ನಟ, ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಸಾಧು ಕೋಕಿಲ ಹಾಗೂ ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.
ಗೀತಾ ಶಿವರಾಜಕುಮಾರ್ ಅವರು 2014ರಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಲ್ಲದೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೂ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ವಾರದ ಹಿಂದಷ್ಟೇ ಸೊರಬದಲ್ಲಿ ಸಹೋದರ ಮಧು ಬಂಗಾರಪ್ಪ ಪರ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದರು.
ರಾಜಕೀಯದ ಜೊತೆಗೆ ‘ಗೀತಾ ಪಿಚ್ಚರ್ಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿರುವ ಗೀತಾ ಶಿವರಾಜ ಕುಮಾರ್, ಹಲವು ಕನ್ನಡ ಸಿನಿಮಾಗಳು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೀಗ ಕಾಂಗ್ರೆಸ್ ಸೇರ್ಪಡೆ ಆಗುವ ಮೂಲಕ ಅವರು ಸಹೋದರ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪ್ರಚಾರಕ್ಕೆ ತೆರಳಿದ್ದ ವೇಳೆ ಶಾಸಕ ಶರತ್ ಬಚ್ಚೇಗೌಡ ಪತ್ನಿಯ ಕಾರಿನ ಗಾಜು ಒಡೆದ ಕಿಡಿಗೇಡಿಗಳು: ಪ್ರಕರಣ ದಾಖಲು







