ಉತ್ತರ ಪ್ರದೇಶ: ಈದ್ ಸಂದರ್ಭ ರಸ್ತೆಯಲ್ಲಿ ನಮಾಝ್ ಮಾಡಿದ್ದ ಹಲವರ ವಿರುದ್ಧ ಎಫ್‌ಐಆರ್ ದಾಖಲು

ಲಕ್ನೋ: ಈದ್ ಸಂದರ್ಭ ಕಳೆದ ವಾರ ಅನುಮತಿ ಇಲ್ಲದೆ ರಸ್ತೆಯಲ್ಲಿ ನಮಾಝ್ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ಆಲಿಘರ್ ಮತ್ತು ಕಾನ್ಪುರ್‌ನಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಆಲಿಘರ್ ಜಿಲ್ಲೆಯ ಡೆಲ್ಲಿ ಗೇಟ್ ಮತ್ತು ಕೊತ್ವಾಲಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಕಾನ್ಪುರದ ಬಬು ಪುರ್ವ ಮತ್ತು ಬಜಾರಿಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಎಪ್ರಿಲ್ 22 ರಂದು ಸೆಕ್ಷನ್ 144 ಉಲ್ಲಂಘನೆ ಮತ್ತು ರಸ್ತೆಗೆ ಅಡ್ಡಿಯುಂಟು ಮಾಡಿದ ತಪ್ಪಿಗಾಗಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 144 ಇರುವ ಹೊರತಾಗಿಯೂ ಹಲವು ಜನರು ರಸ್ತೆಯಲ್ಲಿ ಕುಳಿತಿದ್ದರು. ನಂತರ ಪೊಲೀಸರು ಅವರನ್ನು ತೆರವುಗೊಳಿಸಿದ್ದರು,” ಎಂದು ಆಲಿಘರ್ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಸಿಂಗ್ ಗುಣವತ್ ಹೇಳಿದ್ದಾರೆ.
ನಮಾಝ್ ನಡೆದ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಕಾನ್ಪುರದಲೂ ಪ್ರಕರಣ ದಾಖಲಾಗಿದೆ.
ಈದ್ ಸಂದರ್ಭ ಮಸೀದಿಗಳಲ್ಲಿ ಮಾತ್ರ ನಮಾಜ್ ಸಲ್ಲಿಸಬೇಕು ಎಂದು ರಾಜ್ಯ ಸರಕಾರ ಸೂಚಿಸಿತ್ತಲ್ಲದೆ ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಶಾಂತಿ ಸಮಿತಿ ಸಭೆಗಳನ್ನೂ ನಡೆಸಿತ್ತು.