ಕಾಂಗ್ರೆಸ್ ಸೇರಿದ ಪತ್ನಿ ಗೀತಾಗೆ ಸಂಪೂರ್ಣ ಬೆಂಬಲ: ನಟ ಶಿವರಾಜ್ ಕುಮಾರ್ ಹೇಳಿದ್ದೇನು?

ಬೆಂಗಳೂರು, ಎ.28: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರಿ ಹಾಗೂ ನಟ ಶಿವರಾಜ ಕುಮಾರ್ ಅವರ ಪತ್ನಿ ಗೀತಾ ಶಿವರಾಜ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ಶಿವರಾಜ್ ಕುಮಾರ್, ' ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದ ತತ್ವ, ಸಿದ್ಧಾಂತಗಳಿರುತ್ತವೆ. 'ನಮ್ಮ ತಾಯಿಯವರು ತೀರಿಹೋದಮೇಲೆ ಗೀತಾ ಅವರು ಕೆಲವು ವರ್ಷಗಳಿಂದ ಮೈಸೂರಿನ ಶಕ್ತಿಧಾಮ ಶಾಲೆಗೆ ಬಹಳ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಮಕ್ಕಳ ಉದ್ಧಾರಕ್ಕೆ ದುಡಿಯುತ್ತಿದ್ದಾರೆ. ಹೀಗಾಗಿ ರಾಜಕೀಯ ಪಕ್ಷ ಸೇರಿದಾಗ ಅವರ ಸಮಾಜಮುಖಿ ಕೆಲಸಗಳಿಗೆ ಮತ್ತಷ್ಟು ಅವಕಾಶ ಸಿಕ್ಕಿದಂತಾಗುತ್ತದೆ' ಎಂದರು.
'ನಾಳೆಯಿಂದ ಗೀತಾ ಜೊತೆ ಪ್ರಚಾರಕ್ಕೆ ಹೋಗುತ್ತೇನೆ. ಅವರ ಸಹೋದರ ಮಧು ಬಂಗಾರಪ್ಪ ಅವರು ಪ್ರಚಾರದ ಸಮಯ, ಹೋಗಬೇಕಾದ ಸ್ಥಳಗಳ ಬಗ್ಗೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಗೀತಾ;
ಗೀತಾ ಶಿವರಾಜಕುಮಾರ್ ಅವರು 2014ರಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಲ್ಲದೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ವಿರುದ್ಧ ಚುನಾವಣೆಗೂ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.







