ನನ್ನ ಕ್ಷೇತ್ರದಲ್ಲಿ ಹಿಂದುತ್ವ ಗಿಂದುತ್ವ ಇಲ್ಲ, ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಮತ ಕೇಳುತ್ತೇನೆ ಎಂದ ಬಿಜೆಪಿ ಶಾಸಕ
ಕರ್ನಾಟಕ ವಿಧಾನಸಭಾ ಚುನಾವಣೆ

ಮೈಸೂರು: 'ನನ್ನ ಕ್ಷೇತ್ರದಲ್ಲಿ ಹಿಂದುತ್ವ ಗಿಂದುತ್ವ ಇಲ್ಲ, ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಮತ ಕೇಳುತ್ತೇನೆ' ಎಂದು ಚಾಮರಾಜ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ನನ್ನ ಕ್ಷೇತ್ರದಲ್ಲಿ ಹಿಂದುತ್ವ ಇಲ್ಲ , ಅಭಿವೃದ್ಧಿ ವಿಚಾರ ಒಂದೇ ಮಾನದಂಡ. ಇದನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಹೊರತು ಹಿಂದುತ್ವ ಮುಂದಿಟ್ಟುಕೊಂಡು ಮತ ಕೇಳುವುದಿಲ್ಲ' ಎಂದು ಹೇಳಿದರು.
ನಿಮ್ಮ ರಾಜ್ಯಾಧ್ಯಕ್ಷರು ರಸ್ತೆ ಚರಂಡಿ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಎಲ್.ನಾಗೇಂದ್ರ, 'ಅವರು ಆ ರೀತಿ ಹೇಳಿಲ್ಲ, ಅದೆಲ್ಲಾ ಬರಿ ಸೃಷ್ಟಿ ಅಷ್ಟೇ? ನನಗೆ ಅದರ ಬಗ್ಗೆ ಏನು ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಮತ ಕೇಳುತ್ತೇನೆ' ಎಂದು ಸ್ಪಷ್ಟಪಡಿಸಿದರು.
'ಈಗಾಗಲೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದೇನೆ. ಮುಂದೆ ಇನ್ನು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಮತ್ತೊಮ್ಮೆ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ' ಎಂದರು.
ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಉಪಸ್ಥಿತರಿದ್ದರು.








