ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಇಂದು ಪ್ರಕರಣ ದಾಖಲಿಸುತ್ತೇವೆ: ಸುಪ್ರೀಂಗೆ ದಿಲ್ಲಿ ಪೊಲೀಸರು

ಹೊಸದಿಲ್ಲಿ: ಅಪ್ರಾಪ್ತ ವಯಸ್ಕರು ಸೇರಿದಂತೆ ಏಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪದಕ ವಿಜೇತರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ ನ ಪ್ರಭಾವಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan) ವಿರುದ್ಧ ಇಂದು ಪ್ರಕರಣ ದಾಖಲಿಸುವುದಾಗಿ ದಿಲ್ಲಿ ಪೊಲೀಸರು ಸುಪ್ರೀಂಕೋರ್ಟ್ ಗೆ ಭರವಸೆ ನೀಡಿದ್ದಾರೆ.
ಹಲವಾರು ಪ್ರಮುಖ ಕುಸ್ತಿಪಟುಗಳು ಸಿಂಗ್ ವಿರುದ್ದ ಲೈಂಗಿಕ ದುರ್ವರ್ತನೆ ಆರೋಪಿಸಿ ಮತ್ತೊಮ್ಮೆ #MeToo ಪ್ರತಿಭಟನೆಯ ಆರಂಭಿಸಿರುವ ನಡುವೆ ಕುಸ್ತಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ದಿಲ್ಲಿ ಪೊಲೀಸರು ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗದ ಆರೋಪದ ನಂತರ ಎಫ್‌ಐಆರ್ ದಾಖಲಿಸುವಂತೆ ಕೋರಿ ಭಾರತದ ಪ್ರಮುಖ ಕುಸ್ತಿಪಟುಗಳು ಸಲ್ಲಿಸಿದ ಮನವಿಯನ್ನು ಸಿಜೆಐ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಶುಕ್ರವಾರ ಆಲಿಸಿತು. ಬ್ರಿಜ್ ಭೂಷಣ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸರಿಗೆ ಸಿಜೆಐ ಚಂದ್ರಚೂಡ್ ಆದೇಶಿಸಿದರು.





