ಕಿರುಕುಳ ಪ್ರಕರಣ: ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಜಾಮೀನು ಅರ್ಜಿ ವಜಾ

ಬೆಂಗಳೂರು, ಎ.28: ಅಸ್ಸಾಂ ಕಾಂಗ್ರೆಸ್ ಯುವ ಘಟಕದ ಉಚ್ಛಾಟಿತ ಮುಖ್ಯಸ್ಥೆಯೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‍ಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರಾತಿಗೆ ನಿರಾಕರಿಸಿದೆ.
ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಪೀಠ, ಜಾಮೀನು ಮಂಜೂರಾತಿಗೆ ನಿರಾಕರಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಸಂತ್ರಸ್ತ ಮಹಿಳೆಯು ಶ್ರೀನಿವಾಸ್ ವಿರುದ್ಧ ದುರುದ್ದೇಶದಿಂದ ಆರೋಪ ಮಾಡಿದ್ದು, ಬಹಳ ದಿನಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಅಸ್ಸಾಂ ಪೊಲೀಸರು ಬಂಧಿಸಲು ಕರ್ನಾಟಕಕ್ಕೆ ಬಂದಿದ್ದಾರೆ. ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಹಾಜರಾಗುತ್ತಾರೆ ಎಂದು ವಾದ ಮಂಡಿಸಿದ್ದರು.
ಕರ್ನಾಟಕದವರಾದ ಕಾಂಗ್ರೆಸ್ ಮುಖಂಡ ಬಿ.ವಿ.ಶ್ರೀನಿವಾಸ್ ಅವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ(ಅಸ್ಸಾಂ ಕಾಂಗ್ರೆಸ್ ಯುವಘಟಕದ ಉಚ್ಛಾಟಿತ ಮುಖ್ಯಸ್ಥೆ)ಯು ಅಸ್ಸಾಂನ ಕಾಮರೂಪ್ ಜಿಲ್ಲೆಯಲ್ಲಿರುವ ದಿಸ್‍ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.





