ಎ.29ರಂದು ‘ವಾತ್ಸಲ್ಯ’ ಉಪಶಾಮಕ ಆರೈಕೆ ಘಟಕ ಲೋಕಾರ್ಪಣೆ

ಉಡುಪಿ, ಎ.28: ಉಡುಪಿಯ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆ ತನ್ನ ಶತಮಾನೋತ್ಸವ ವರ್ಷಾ ಚರಣೆಯ ಅಂಗವಾಗಿ ಆರಂಭಿಸಿರುವ ‘ವಾತ್ಸಲ್ಯ’ ಉಪಶಾಮಕ ಆರೈಕೆ ಘಟಕ(ಪ್ಯಾಲೇಟಿವ್ ಕೇರ್ ಯುನಿಟ್)ದ ಲೋಕಾ ರ್ಪಣೆ ಎ.29ರಂದು ಅಪರಾಹ್ನ 3.30 ಗಂಟೆಗೆ ನಡೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸುಶಿಲ್ ಜತ್ತನ್ನ ತಿಳಿಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿರುವ ವಾತ್ಸಲ್ಯ ಘಟಕದಲ್ಲಿ ಇಂದು ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟಕವು ಹೆಚ್ಚುತ್ತಿರುವ ಕ್ಯಾನ್ಸರ್ ಮತ್ತು ಸಾವಿನ ಅಂಚಿನಲ್ಲಿರುವ ರೋಗಿಗಳ ಅಗತ್ಯಗಳನ್ನು ಪೂರೈಸಲಿದೆ. 1923ರಲ್ಲಿ ಸ್ಥಾಪಿಸಲಾದ ಮಿಷನ್ ಆಸ್ಪತ್ರೆ 2023ರ ಜೂ.15ರಂದು 100 ವರ್ಷಗಳ ಸೇವೆಯನ್ನು ಪೂರ್ಣ ಗೊಳಿಸಲಿದೆ. ಆಸ್ಪತ್ರೆಯ ಶತಮಾನೋತ್ಸವದ ವರ್ಷಾಚರಣೆಯ ಅಂಗವಾಗಿ ಸ್ಥಾಪಿಸಲಾದ ಮಹತ್ವದ ಯೋಜನೆಗಳಲ್ಲಿ ವಾತ್ಸಲ್ಯವೂ ಒಂದಾಗಿದೆ ಎಂದರು.
ಘಟಕವನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ರೆ.ಫಾ. ಹೇಮಚಂದ್ರ ಕುಮಾರ್ ಉದ್ಘಾಟಿ ಸಲಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಎನ್., ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಣಿಪಾಲ ಕೆಎಂಸಿಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಕಾರ್ತಿಕ್, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ನಿರ್ದೇಶಕ ಡಾ. ಸುರೇಶ್ ರಾವ್ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ವಿನಯ್ ರಾಜೇಂದ್ರ ಭಾಗವಹಿಸಲಿರುವರು. ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಅಧ್ಯಕ್ಷತೆ ವಹಿಸಲಿರುವರು.
ವಾತ್ಸಲ್ಯ ಘಟಕವು ತೀವ್ರ ಅಸ್ವಸ್ಥರಾಗಿರುವ ಕ್ಯಾನ್ಸರ್ ರೋಗಿಗಳಿಗೆ ಅವರ ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ ಸಮುದಾಯ ಆಧಾರಿತ ಸಮಗ್ರ ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅವರ ನೋವು ಮತ್ತು ಸಂಕಟಗಳನ್ನು ಕೊನೆಗೊಳಿಸುವ ಮತ್ತು ಅವರ ಕುಟುಂಬದ ಆರೈಕೆಯ ಹೊರೆಯನ್ನು ನಿವಾರಿ ಸುವ ಮೂಲಕ ಈ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲಿದೆ ಎಂದು ಡಾ.ಸುಶಿಲ್ ಜತ್ತನ್ನ ತಿಳಿಸಿದ್ದಾರೆ.
ಈ ಕೇಂದ್ರವು ಸಾಮಾನ್ಯ ವಾರ್ಡ್ ಹಾಸಿಗೆಗಳು, ವಿಶೇಷ ಕೊಠಡಿಗಳು ಸೇರಿದಂತೆ 30 ಬೆಡ್‌ಗಳನ್ನು ಹೊಂದಿವೆ. ಚಿಕಿತ್ಸಾ ಕೊಠಡಿ ಮತ್ತು ಭೋಜನಾಲ ಯವನ್ನು ಒಳಗೊಂಡಿರುವ ಒಂದು ಸ್ವತಂತ್ರ ಘಟಕ ಇದಾಗಿದೆ. ಉಪಶಾಮಕ ಆರೈಕೆ ತಜ್ಞರು, ದಾದಿಯರು, ಫಿಸಿಯೋಥೆರಪಿ ಮತ್ತು ಮಾನಸಿಕ ಆರೋಗ್ಯ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರ ತಂಡ ಈ ಘಟಕದ ಮೇಲ್ವಿಚಾರಣೆ ನಡೆಸಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್, ಆಡಳಿತಾಧಿಕಾರಿ ದೀನಾ, ನರ್ಸಿಂಗ್ ಅಧೀಕ್ಷಕಿ ಹೆಲೆನ್ ಮಥಾ ಯಸ್, ಪಿಆರ್‌ಓ ರೋಹಿ ರತ್ನಾಕರ್ ಉಪಸ್ಥಿತರಿದ್ದರು.







