ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ:ಕಾರ್ಮಿಕ ವರ್ಗದ ಹಕ್ಕೊತ್ತಾಯಗಳ ಕಾರ್ಮಿಕ ಪ್ರಣಾಳಿಕೆ ಬಿಡುಗಡೆ

ಮಂಗಳೂರು, ಎ.28: ಶಾಂತಿ ಸೌಹಾರ್ದ ಸಾಮರಸ್ಯದ ಕರ್ನಾಟಕಕ್ಕಾಗಿ, ದುಡಿಯುವ ಜನರ ಹಕ್ಕುಗಳು ಹಾಗೂ ಜೀವನೋಪಾಯದ ರಕ್ಷಣೆಗಾಗಿ, ಕಾರ್ಪೊರೇಟ್ ಪ್ರೇರಿತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಜ್ಯದ ಲಕ್ಷಾಂತರ ಕಾರ್ಮಿಕರ ಹಕ್ಕೊತ್ತಾಯಗಳನ್ನು ಒಳಗೊಂಡ ಕಾರ್ಮಿಕ ಪ್ರಣಾಳಿಕೆಯನ್ನು ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಶುಕ್ರವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ವರ್ಷಗಳ ಕಾರ್ಪೋರೇಟ್ ಪರ ಆರ್ಥಿಕ ನೀತಿಗಳು, ಮೂರು ವರ್ಷಗಳ ಹಿಂದಿನ ಕೊರೋನ ಮತ್ತು ಕೋರೊನೋತ್ತರ ಕಾಲಘಟ್ಟದಲ್ಲಿ ಕಾರ್ಮಿಕ ವರ್ಗ ಎದುರಿಸಿದ ಸಾವು ನೋವುಗಳು ಹಾಗೂ ದುಡಿಮೆಯ ಪ್ರಶ್ನೆಗಳು, ನಾಲ್ಕು ವರ್ಷಗಳ ಬಿಜೆಪಿ ಸರಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿ ನೀತಿಗಳು, ಜನರನ್ನು ಛಿದ್ರಗೊಳಿಸಲು ಅನುಸರಿಸಿದ ಮತೀಯವಾದಿ ನಿಲುವುಗಳು ರಾಜ್ಯದ ಜನತೆಯ ಬದುಕಿಗೆ ಹಾಗೂ ನಾಡಿನ ಸೌಹಾರ್ದ ಪರಂಪರೆಗೆ ತೀವ್ರ ಘಾಸಿಗೊಳಿಸಿದೆ ಎಂದರು.
ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು 8 ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಳಗೊಳಿಸಿದ್ದಲ್ಲದೆ ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸವನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರಕಾರದ ಕ್ರಮವು ಅತ್ಯಂತ ನಿರ್ದಯಿ ಹಾಗೂ ಕಠೋರತೆಯಿಂದ ಕೂಡಿದೆ. ಈ ಮೂಲಕ ಮೇ ದಿನದ 8 ಗಂಟೆಗಳ ದುಡಿಮೆಯ ಹಕ್ಕನ್ನು ಮೊಟಕುಗೊಳಿಸಿರುವ ದೇಶದ ಏಕೈಕ ರಾಜ್ಯವೆಂಬ ಕುಖ್ಯಾತಿಗೆ ಕರ್ನಾಟಕ ಒಳಗಾಗಿದೆ. ಇಂತಹ ಭ್ರಷ್ಟ, ಕೋಮುವಾದಿ, ಕಾರ್ಮಿಕ ವಿರೋಧಿ ಬಿಜೆಪಿ ಸರಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೇರದಂತೆ ತಡೆಗಟ್ಟಲು, ರಾಜ್ಯದ ಕಾರ್ಮಿಕ ವರ್ಗವನ್ನು ಜಾಗೃತಿಗೊಳಿಸುವ ಸಲುವಾಗಿ ಕಾರ್ಮಿಕ ಪ್ರಣಾಳಿಕೆಯನ್ನು ತಯಾರಿಸಲಾಗಿದೆ ಎಂದರು.
ರಾಜ್ಯಾದ್ಯಂತ ಶಾಸನಬದ್ಧ ಸಮಾನ ಹಾಗೂ ಏಕರೂಪದ ಕನಿಷ್ಠ ವೇತನ 36 ಸಾವಿರ ರೂ. ನಿಗದಿಗೊಳಿ ಸಬೇಕು, ನಿರಂತರವಾಗಿ ಏರುತ್ತಿರುವ ಜೀವನೋಪಾಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಅಂಗನವಾಡಿ, ಬಿಸಿಯೂಟ, ಆಶಾ ಸಹಿತ ಎಲ್ಲ ಸ್ಕೀಂ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಅಸಂಘ ಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಕಲ್ಯಾಣನಿಧಿ ಸಹಿತ ಇತರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು. ಅಧಿಕಾರ ವಿಕೇಂದ್ರೀಕರಣ ಬಲಪಡಿಸುವ ಮೂಲಕ ಗ್ರಾಪಂ ನೌಕರರ ಕೆಲಸ ಖಾಯಂಗೊಳಿಸಿ ಕನಿಷ್ಟ ವೇತನ ಜಾರಿ ಮಾಡಬೇಕು, ವಸತಿ ರಹಿತ ಕಾರ್ಮಿಕರಿಗೆ ಕೇರಳ ಮಾದರಿಯಲ್ಲಿ ವಾಸಯೋಗ್ಯ ವಸತಿ ಯೋಜನೆ ಜಾರಿಗೊಳಿಸಬೇಕು ಇತ್ಯಾದಿ ಪ್ರಣಾಳಿಕೆಯಲ್ಲಿ ಸೇರಿದೆ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಾರದಂತೆ ಕಾರ್ಮಿಕ ವರ್ಗವು ಪ್ರಬಲ ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡಬೇಕು ಎಂದು ಸಿಐಟಿಯು ದ.ಕ.ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮನವಿ ಮಾಡಿದರು.
ಮೇ 1ರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ
ಕೋಮುವಾದ-ಕಾರ್ಪೊರೇಟ್ ಸಂಸ್ಥೆಗಳ ಅಕ್ರಮಕೂಟಗಳ ಹುನ್ನಾರವನ್ನು ಬಯಲಿಗೆಳೆಯಲು ಹಾಗೂ ಕೆಲಸದ ಅವಧಿ 12 ಗಂಟೆಗಳ ಹೆಚ್ಚಳ ಮಾಡಿದ ರಾಜ್ಯ ಸರಕಾರದ ವಿರುದ್ಧ, ಈ ವರ್ಷದ ಮೇ ದಿನವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಚರಿಸಲು ಕಾರ್ಮಿಕ ನಾಯಕರು, ಚಳುವಳಿಯ ಹಿತೈಷಿಗಳು ಸಹಿತ 175 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
ಮೇ 1ರಂದು ಬೆಳಗ್ಗೆ 10ಕ್ಕೆ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯಿಂದ ಕಾರ್ಮಿಕರ ಮೆರವಣಿಗೆ ಮತ್ತು ಬಳಿಕ ಡಾನ್ ಬಾಸ್ಕೋ ಹಾಲ್‌ನಲ್ಲಿ ಬಹಿರಂಗ ಸಭೆಯು ನಡೆಯಲಿದೆ. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸ್ಥಾಪಕಾಧ್ಯಕ್ಷ ಜಿ.ಎನ್. ನಾಗರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸುನೀಲ್ ಕುಮಾರ್ ಬಜಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸುಂದರ ಕುಂಪಲ, ಪದ್ಮಾವತಿ ಶೆಟ್ಟಿ, ನೋಣಯ್ಯ ಗೌಡ ಉಪಸ್ಥಿತರಿದ್ದರು.







