ಎ. 29ರಂದು ಮೂಡುಬಿದಿರೆಯಲ್ಲಿ ಯೂತ್ -20 ಸಂವಾದ ಕಾರ್ಯಕ್ರಮ

ಮಂಗಳೂರು: ಸಿಐಐ ಯಂಗ್ ಇಂಡಿಯನ್ಸ್ ಮಂಗಳೂರು, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ಎ. 29ರಂದು ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಕ್ಯಾಂಪಸ್‌ನಲ್ಲಿ ಯೂತ್ -20 ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಂಗಳೂರು ಯಂಗ್ ಇಂಡಿಯನ್ಸ್ (ವೈಐ) ಘಟಕದ ಅಧ್ಯಕ್ಷೆ ಸಮೀಕ್ಷಾ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೈ.ಐ. ಮಂಗಳೂರು ಘಟಕ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳು ಮತ್ತು ಮೂಡಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯ ವಿದ್ಯಾರ್ಥಿಗಳು ಇದರಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿದ್ಯಾರ್ಥಿಗಳು ಯುವ ಉದ್ಯಮಿಗಳೊಂದಿಗೆ ಸಂವಹನ ನಡೆಸಲಿದ್ದು, ಇದು ವರ್ತಮಾನದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಡಿಜಿಟಲೀಕರಣ ಮತ್ತು ಸುಸ್ಥಿರತೆಯ ಮಹತ್ವವನ್ನು ಅರಿಯಲು ಸಹಾಯಕವಾಗಲಿದೆ ಎಂದು ವಿವರಿಸಿದರು.
ಮೊದಲ ಅಧಿವೇಶನ: ಭವಿಷ್ಯಕ್ಕಾಗಿ ವ್ಯವಹಾರವನ್ನು ಮರುಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಯುವ ಸಾಧಕರ ನಡುವೆ ಸಂವಾದ ನಡೆಯಲಿದೆ. ಸುಸ್ಥಿರತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಪ್ಯಾನಲ್ ಚರ್ಚೆಯು ನಡೆಯಲಿದ್ದು ಇದರ ನೇತೃತ್ವವನ್ನು ಯುಎನ್ ಮಹಿಳಾ ಪ್ರಶಸ್ತಿ ಪುರಸ್ಕೃತ ಉದ್ಯಮಿ ದಿವ್ಯಾ ಹೆಗ್ಡೆ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವೈಜ್ಞಾನಿಕ ಅಧಿಕಾರಿ ಡಾ.ಟಿ.ವಿ.ರಾಮಚಂದ್ರ ಮತ್ತು ಲೇಕ್ ಮ್ಯಾನ್ ಆಫ್ ಇಂಡಿಯಾ ಹಾಗೂ ಎ ಲೈಫ್ ವಿದ್ ಲೇಕ್ಸ್ ಲೇಖಕ ಆನಂದ್ ಮಲ್ಲಿಗವಾಡ್ ವಹಿಸಲಿದ್ದಾರೆ.
ಎರಡನೇ ಅಧಿವೇಶನ: ಭವಿಷ್ಯಕ್ಕಾಗಿ ವ್ಯಾಪಾರೋದ್ಯಮವನ್ನು ಮರುರೂಪಿಸುವ ಕುರಿತು ಭಾರತದ ಯುವ ಸಾಧಕರ ನಡುವೆ ಸಂವಾದ - ವೇಗವರ್ಧಿತ ಡಿಜಿಟಲೀಕರಣದ ಬಗ್ಗೆ ಪ್ಯಾನಲ್ ಚರ್ಚೆ ನಡೆಯಲಿದ್ದು, ಇದರ ನೇತೃತ್ವವನ್ನು ವೈ.ಐ.ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷ ದೀಕ್ಷಿತ್ ರೈ ವಹಿಸಲಿದ್ದಾರೆ. ಇ-ಸಮುದಾಯ್ ಸ್ಥಾಪಕ ಮತ್ತು ಸಿಇಒ ಅನೂಪ್ ಪೈ ಹೆಲ್ತ್ ಫಿಕ್ಸ್ ಟೆಕ್ನಾಲಜೀಸ್ ಮತ್ತು ಝಿನೋ ಟೆಕ್ನಾಲಜೀಸ್ ಸ್ಥಾಪಕ ರಘುರಾಜ್ ಸುಂದರ್ ರಾಜ್ ಭಾಗವಹಿಸಲಿದ್ದಾರೆ.
ಈ ವರ್ಷದ ಜುಲೈಯಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿರುವ 2023ರ ಜಿ 20 ಶೃಂಗಸಭೆಗೆ ಆತಿಥ್ಯ ವಹಿಸುವ ಹೆಮ್ಮೆ ಭಾರತದ್ದಾಗಿದೆ.
ಭಾರತೀಯ ಕೈಗಾರಿಕೋದ್ಯಮದ ಒಕ್ಕೂಟ (ಸಿಐಐ) ಇದರ ಅಂಗವಾಗಿರುವ ಯಂಗ್ ಇಂಡಿಯನ್ಸ್ (ವೈಐ) 2023 ರ ಜುಲೈ 13ರಿಂದ 15 ರವರೆಗೆ ದಿಲ್ಲಿಯಲ್ಲಿ ಜಿ 20 ವೈಇಎ ಇಂಡಿಯಾ ಶೃಂಗಸಭೆಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿದೆ ಎಂದು ಸಮೀಕ್ಷಾ ಶೆಟ್ಟಿ ತಿಳಿಸಿದರು.
ವೈ.ಐ.ಯ ಮಂಗಳೂರು ಘಟಕದ ಸಹ ಅಧ್ಯಕ್ಷೆ ಸಲೋಮ್ ಲೋಬೊ ಪಿರೇರಾ ,ಸಂಘಟಕರಾದ ಅಶ್ರಿಕಾ ಅಮಿನ್ , ಮಧುಕರ ಕುಡ್ವ, ಶರಣ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







