ಯತ್ನಾಳ್ ರನ್ನು ಪಕ್ಷದಿಂದ ವಜಾ ಮಾಡಿ; ಮೋದಿ, ಬೊಮ್ಮಾಯಿ ಕ್ಷಮೆಯಾಚಿಸಲಿ: ಡಿಕೆಶಿ, ಸಿದ್ದರಾಮಯ್ಯ ಒತ್ತಾಯ
ಸೋನಿಯಾ ಗಾಂಧಿ ವಿರುದ್ಧ ಹೇಳಿಕೆ ವಿಚಾರ

ಬೆಂಗಳೂರು, ಎ.28: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ‘ವಿಷಕನ್ಯೆ’ ಎಂದು ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರನ್ನು ಬಿಜೆಪಿಯಿಂದ ವಜಾಗೊಳಿಸಬೇಕು. ಈ ಕುರಿತು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷಮೆಯಾಚಿಸಬೇಕು ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಗೆ ಬಸನಗೌಡ ಯತ್ನಾಳ್ ವಿಷ ಕನ್ಯೆ ಎಂದಿದ್ದಾರೆ. ರಾಜ್ಯದ ಸಂಸ್ಕೃತಿ ಇರುವ ಜನರು ಅವರನ್ನು ಏನು ಮಾಡುತ್ತಾರೆ ಎಂದು ಗೊತ್ತಿಲ್ಲ. ಯಾವ ಕಾರಣಕ್ಕೂ ಕಾಂಗ್ರೆಸ್ ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ಹೇಳಿಕೆ ಮಹಿಳೆಗೆ ಮಾಡಿದ ಅಪಮಾನವಾಗಿದ್ದು, ನಡ್ಡಾ ಅವರಿಗೆ ದಮ್ ಇದ್ದರೆ ಯತ್ನಾಳ್‍ರನ್ನು ಬಿಜೆಪಿಯಿಂದ ಕೂಡಲೇ ವಜಾ ಮಾಡಬೇಕು. ನೆಹರು, ಗಾಂಧಿ ಕುಟುಂಬವನ್ನು ನಿಂದಿಸುವುದೇ ಬಿಜೆಪಿಯವರಿಗೆ ಚಾಳಿಯಾಗಿದೆ. ಅವರು ರಾಹುಲ್ ಗಾಂಧಿಯನ್ನು ಹೈಬ್ರಿಡ್ ಕಾಲ್ಫ್, ಕಾಂಗ್ರೆಸ್ ವಿಡೋ ಎಂದು ಕರೆದಿದ್ದಾರೆ. ಇದೆಲ್ಲವೂ ಸರಿಯಿರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ದೇಶದಲ್ಲಿ ಬದಲಾವಣೆ ಕರ್ನಾಟಕದಿಂದ ಆರಂಭವಾಗಲಿದೆ. ಈ ರಾಜ್ಯ ಇಂದಿರಾ ಗಾಂಧಿ ಅವರಿಗೆ ಮರುಜನ್ಮ ಕೊಟ್ಟಿದೆ, ಸೋನಿಯಾ ಗಾಂಧಿ ಅವರಿಗೆ ಶಕ್ತಿ ತುಂಬಿದೆ. ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೇಳುವ ಮುನ್ನ ಬಿಜೆಪಿ ಆತನನ್ನು ಪಕ್ಷದಿಂದ ಹೊರಹಾಕಬೇಕು. ಇನ್ನು ಕಾಂಗ್ರೆಸ್‍ನ ಗ್ಯಾರಂಟಿಗಳು ಬಿಜೆಪಿಯವರ ಹೇಳಿಕೆಗಳನ್ನು ಸುಡುತ್ತವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಪ್ರಧಾನಿ ಮೋದಿ ವರ್ಚುವಲ್ ಸಭೆ ಮಾಡಿ 50 ಲಕ್ಷ ಜನರ ಜತೆ ಸಭೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಹಾಗೂ ಬೊಮ್ಮಾಯಿ ಅವರು ಈ ಸಭೆ ಮಾಡಲು ಚುನಾವಣಾ ಆಯೋಗದಿಂದ ಅನುಮತಿ ಪಡೆದಿತ್ತೇ, ಚುನಾವಣಾ ಆಯೋಗದ ನೀತಿ ಸಂಹಿತೆ ಏನು ಹೇಳುತ್ತದೆ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಯತ್ನಾಳ್‍ರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಪ್ರಧಾನಿ ಸೂಚನೆ ನೀಡಬೇಕು: ಸಿದ್ದರಾಮಯ್ಯ
‘ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸುವಂತೆ ಪ್ರಧಾನಿ ಮೋದಿ ಸೂಚನೆ ನೀಡಬೇಕು, ಇಲ್ಲದೆ ಇದ್ದರೆ ಅವರ ಬೆಂಬಲದಿಂದಲೇ ಯತ್ನಾಳ್ ಇಂತಹ ನೀಚತನದ ಪ್ರದರ್ಶನ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.