ಕುಸ್ತಿಪಟುಗಳ ಪ್ರತಿಭಟನೆಯ ವಿರುದ್ಧ ಪಿ.ಟಿ.ಉಷಾ ಹೇಳಿಕೆಗೆ ಸಂಸದ ಶಶಿ ತರೂರ್ ತಿರುಗೇಟು ನೀಡಿದ್ದು ಹೀಗೆ...

ಹೊಸ ದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಟೀಕಿಸಿರುವ ಭಾರತೀಯ ಒಲಿಂಪಿಕ್ಸ್ ಒಕ್ಕೂಟದ ಮುಖ್ಯಸ್ಥೆ ಪಿ.ಟಿ.ಉಷಾ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ತಿರುವನಂತಪುರಂ ಸಂಸದರೂ ಆಗಿರುವ ಶಶಿ ತರೂರ್, " ಪಿ.ಟಿ.ಉಷಾ ಅವರೇ, ಕ್ರೀಡಾಪಟುಗಳ ವಿರುದ್ಧ ನಡೆದಿರುವ ಲೈಂಗಿಕ ಕಿರುಕುಳದ ವಿರುದ್ಧ ನಡೆಯುತ್ತಿರುವ ನ್ಯಾಯೋಚಿತ ಪ್ರತಿಭಟನೆಯನ್ನು ನೀವು ಧಿಕ್ಕರಿಸುವುದು ತರವಲ್ಲ. ತಮ್ಮ ಹಕ್ಕಿಗಾಗಿ ಅವರು ಎದ್ದು ನಿಂತಿರುವುದರಿಂದ ದೇಶದ ವ್ಯಕ್ತಿತ್ವವನ್ನು ಹರಣ ಮಾಡಿದಂತಾಗುವುದಿಲ್ಲ. ಅವರ ಕಳವಳವನ್ನು ನಿರ್ಲಕ್ಷಿಸುವ ಬದಲು ಅವರ ಮಾತಿಗೆ ಕಿವಿಗೊಡುವ, ಅವನ್ನು ತನಿಖೆಗೊಳಪಡಿಸುವ ಮತ್ತು ಅವುಗಳ ವಿರುದ್ಧ ನ್ಯಾಯೋಚಿತ ಕ್ರಮ ಕೈಗೊಳ್ಳುವುದು ಆಗಬೇಕಿದೆ" ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ವಿರುದ್ಧ ಕುಸ್ತಿ ಪಟುಗಳು ತಮ್ಮ ಸಂಸ್ಥೆಗೆ ದೂರು ನೀಡುವ ಬದಲು ಬೀದಿಯಲ್ಲಿ ಪ್ರತಿಭಟಿಸುವ ಮೂಲಕ ದೇಶಕ್ಕೆ ಕಳಂಕ ತಂದಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಒಕ್ಕೂಟದ ಮುಖ್ಯಸ್ಥೆ ಪಿ.ಟಿ.ಉಷಾ ಕಿಡಿ ಕಾರಿದ್ದರು. ಈ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Next Story





