ಮಂಗಳೂರು: ಸಾನಿಧ್ಯ ಹೈಡ್ರೋ ಈಜುಕೊಳ ಉದ್ಘಾಟನೆ

ಮಂಗಳೂರು, ಎ.28: ಸಾನಿಧ್ಯದ ಬೆಳವಣಿಗೆಗೆ ಬಹಳಷ್ಟು ದಾನಿಗಳು ಜಾತಿ,ಮತ ಧರ್ಮಗ ಭೇದವಿಲ್ಲದೆ ಎಲ್ಲರೂ ದಾನ ಮಾಡುತ್ತಾರೆ. ವಿಶೇಷ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತರಬೇತಿ ನೀಡುತ್ತಿರುವ ಸಾನಿಧ್ಯದ ಕಾರ್ಯವು ಅಭಿನಂದನೀಯ. ಅಕ್ವೆಟಿಕ್ ಥೆರಪಿ ನೀಡಲಿರುವ ಸಾನಿಧ್ಯ ಹೈಡ್ರೋ-ಈಜುಕೊಳವು ವಿಶೇಷ ಮಕ್ಕಳಿಗೆ ವರದಾನವಾಗಲಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾ.ಮೆಲ್ವಿನ್ ಪಿಂಟೋ ಹೇಳಿದರು. ನಗರ ಹೊರವಲಯದ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮಾರ್ಥ್ಯದ ಮಕ್ಕಳ ವಸತಿಯುತ ಶಾಲೆಯಲ್ಲಿ ನಿರ್ಮಿಸಲ್ಪಟ್ಟ ಸಾನಿಧ್ಯ ಹೈಡ್ರೋ-ಈಜುಕೊಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾನಿಧ್ಯ ಹೈಡ್ರೋ-ಈಜುಕೊಳ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಿದ ವಿಶೇಷ ವಿದ್ಯಾರ್ಥಿ ರೆನೆವರ್ ಮಾರಿಯನ್ ಡಿಸೋಜ ಮತ್ತಾತನ ತಂದೆ ಎರಿಕ್ ಜೆಬಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಈಜುಕೊಳ ಕಾಮಗಾರಿ ಮಾಡಿದ ಶಿಲೋಮ್ ಸಂಸ್ಥೆಯ ಮಾಲಕ ಕ್ಲೆನ್ ಫೆರ್ನಾಂಡಿಸ್ ಮತ್ತು ಈಜುಕೊಳ ಮತ್ತಿತರ ಪೂರಕ ಕಾಮಗಾರಿಯನ್ನು ನಿರ್ವಹಿಸಿದ ಸಂತೋಷ್ ಶೆಟ್ಟಿ ಕುಂಬ್ಳೆ ಹಾಗೂ ಈಜುಕೊಳದ ಹಿಂಬದಿಯ ಗೋಡೆಯನ್ನು ಸುಂದರಗೊಳಿಸಿದ ಸಾನಿಧ್ಯದ ಸಹಾಯಕ ಅಡಳಿತಾಧಿಕಾರಿ ಸುಮಾ ಡಿಸಿಲ್ವಾ ಹಾಗೂ ಕರಕುಶಲ ತರಬೇತಿದಾರೆ ಶುಭಾ ಅವರನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಡೈಜಿ ವರ್ಲ್ಡ್‌ನ ನಿರ್ದೇಶಕ ಹೇಮಾಚಾರ್ಯ ಹಾಗೂ ರಾಷ್ಟ್ರೀಯ ಈಜುಪಟು ಬೆಂಗ್ರೆ ಆನಂದ್ ಅಮೀನ್ ಭಾಗವಹಿಸಿದ್ದರು. ಶ್ರೀ ಗಣೇಶ್ ಸೇವಾ ಟ್ರಸ್ಟಿನ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿದ್ದರು.ಟ್ರಸ್ಟಿನ ಖಜಾಂಚಿ ಜಗದೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಮುಹಮ್ಮದ್ ಬಶೀರ್, ಸ್ಟೀಪನ್ ಪಿಂಟೋ, ನಂದಕುಮಾರ್, ದಿವ್ಯಾ ಬಾಳಿಗ, ಗೌರವ ಸಲಹೆಗಾರ ಜ್ಯೋತಿಕಾ ಆಳ್ವ, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಸಾನಿಧ್ಯದ ಯಕ್ಷಗಾನ ಪಟುಗಳನ್ನು, ನಾಟಕದಲ್ಲಿ ಭಾಗವಹಿಸಿದ ನಟರನ್ನು, ನೃತ್ಯಗಾರ್ತಿಯರನ್ನು ಗೌರವಿಸಲಾಯಿತು. ಸಾನಿಧ್ಯದ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮನಶಾಸ್ತ್ರಜ್ಞೆ ಅನಘಾ ಭಾರ್ಗವ್ ಕಾರ್ಯಕ್ರಮ ನಿರೂಪಿಸಿದರು.
Next Story





