ರೈತರ ಪ್ರತಿಭಟನೆಗೆ ಬೆಂಬಲ, ಸಿಪಿಐ (ಎಂ)ಯಿಂದ ಪುಸ್ತಕ ಖರೀದಿ ಆರೋಪ 2 ಅಂಚೆ ಒಕ್ಕೂಟಗಳ ಮಾನ್ಯತೆ ರದ್ದುಪಡಿಸಿದ ಕೇಂದ್ರ

ಹೊಸದಿಲ್ಲಿ, ಎ. 27: ರೈತರ ಪ್ರತಿಭಟನೆಗೆ ಹಣ ದೇಣಿಗೆ ನೀಡಿದ ಹಾಗೂ ಹೊಸದಿಲ್ಲಿಯಲ್ಲಿರುವ ಸಿಪಿಐ (ಮಾಕ್ಸಿಸ್ಟ್) ಕಚೇರಿಯಿಂದ ಪುಸ್ತಕಗಳನ್ನು ಖರೀದಿಸಿದ ಆರೋಪದಲ್ಲಿ ಎರಡು ಅಂಚೆ ಒಕ್ಕೂಟಗಳ ಮಾನ್ಯತೆಯನ್ನು ಕೇಂದ್ರ ಸರಕಾರ ಬುಧವಾರ ರದ್ದುಪಡಿಸಿದೆ. ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಚಳುವಳಿಯನ್ನು ಬೆಂಬಲಿಸಿರುವ ಹಾಗೂ ರಾಜಕೀಯ ಪಕ್ಷವೊಂದಕ್ಕೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ ಆಲ್ ಇಂಡಿಯಾ ಪೋಸ್ಟಲ್ ಎಂಪ್ಲಾಯಿಸ್ ಯೂನಿಯನ್, ನ್ಯಾಷನಲ್ ಫೆಡರೇಶನ್ ಆಫ್ ಪೋಸ್ಟಲ್ ಎಂಪ್ಲಾಯಿಸ್ ನ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ ಎಂದು ಅಂಚೆ ಇಲಾಖೆಯ ಸಹಾಯಕ ಮಹಾ ನಿರ್ದೇಶಕ ನಹರ್ ಸಿಂಗ್ ಮೀನಾ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಆಲ್ ಇಂಡಿಯಾ ಪೋಸ್ಟಲ್ ಎಂಪ್ಲಾಯಿಸ್ ಯೂನಿಯನ್ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಗೆ ಕೂಡ ಹಣದ ನೆರವು ನೀಡಿದೆ ಎಂದು ಆದೇಶ ಹೇಳಿದೆ. ರೈತರ ಐಕಮತ್ಯ ನಿಧಿಗೆ 30 ಸಾವಿರ ರೂ., ಸಿಪಿಐ (ಮಾಕ್ಸಿಸ್ಟ್)ಗೆ 4,935 ರೂ. ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಗೆ 50 ಸಾವಿರ ರೂಪಾಯಿಯನ್ನು ವರ್ಗಾಯಿಸಲಾಗಿದೆ ಎಂದು ಆದೇಶ ತಿಳಿಸಿದೆ. ‘‘ರಾಜಕೀಯ ದೇಣಿಗೆ’’ಗಳನ್ನು ನೀಡುವ ಮೂಲಕ ಟ್ರೇಡ್ ಯೂನಿಯನ್ಗಳು ಕೇಂದ್ರ ನಾಗರಿಕ ಸೇವಾ ಕಾಯ್ದೆ-1993 ಅನ್ನು ಉಲ್ಲಂಘಿಸಿದೆ ಎಂದು ಅಂಚೆ ಇಲಾಖೆ ಹೇಳಿದೆ. ಆದರೆ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಗೆ ರಾಜಕೀಯ ಪಕ್ಷವೆಂದು ಸರಕಾರ ಹಣೆಪಟ್ಟಿ ಹಚ್ಚಿರುವುದು ಹೇಗೆ ? ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಶ್ನಿಸಿದೆ. ಈ ಆದೇಶವನ್ನು ಪ್ರಶ್ನಿಸಲಾಗುವುದು ಎಂದು 8 ಅಂಚೆ ಉದ್ಯೋಗಿ ಸಂಘಟನೆಗಳ ಅತಿ ದೊಡ್ಡ ಒಕ್ಕೂಟ ನ್ಯಾಷನಲ್ ಫೆಡರೇಶನ್ ಆಫ್ ಪೋಸ್ಟಲ್ ಎಂಪ್ಲಾಯಿಸ್ ನ ಸಹಾಯಕ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
Next Story





