ಠಾಕ್ರೆ ಬಣದಿಂದ ಶಿಂಧೆ ಬಣಕ್ಕೆ ಶಿವಸೇನೆ ಆಸ್ತಿಗಳ ವರ್ಗಾವಣೆ ಕೋರಿದ್ದ ಅರ್ಜಿಗೆ ಸುಪ್ರೀಂ ತಿರಸ್ಕಾರ
ಈ ಅರ್ಜಿ ಸಲ್ಲಿಸಲು ನಿಮ್ಮ ಅಧಿಕಾರ ಸ್ಥಾನವೇನು ಎಂದು ಅರ್ಜಿದಾರರನ್ನು ಪ್ರಶ್ನಿಸಿದ ನ್ಯಾಯಾಲಯ

ಈ ಅರ್ಜಿ ಸಲ್ಲಿಸಲು ನಿಮ್ಮ ಅಧಿಕಾರ ಸ್ಥಾನವೇನು ಎಂದು ಅರ್ಜಿದಾರರನ್ನು ಪ್ರಶ್ನಿಸಿದ ನ್ಯಾಯಾಲಯ
ಹೊಸದಿಲ್ಲಿ,ಎ.27: ಉದ್ಧವ ಠಾಕ್ರೆ ಬಣದ ವಶದಲ್ಲಿರುವ ಶಿವಸೇನೆಯ ಎಲ್ಲ ಆಸ್ತಿಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ವರ್ಗಾಯಿಸಲು ರಾಜ್ಯ ಸರಕಾರಕ್ಕೆ ನಿದೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ನೀವು ಯಾರು? ಈ ಅರ್ಜಿಯನ್ನು ಸಲ್ಲಿಸಲು ನಿಮ್ಮ ಅಧಿಕಾರ ಸ್ಥಾನವೇನು?’ ಎಂದು ಅರ್ಜಿದಾರರಾದ ವಕೀಲ ಆಶಿಷ ಗಿರಿಯವರನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಪಿ.ಎಸ್.ನರಸಿಂಹ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಠಾಕ್ರೆ ಬಣ ಮತ್ತು ಶಿಂಧೆ ಬಣದ ನಡುವಿನ ಕಲಹಕ್ಕೆ ಸಂಬಂಧಿಸಿದ ಹಲವಾರು ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸಿದೆ,ಹೀಗಾಗಿ ತಾನು ಈ ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದ ಗಿರಿ,ಪಕ್ಷದ ಆಸ್ತಿಗಳನ್ನು ಶಿಂಧೆ ಬಣಕ್ಕೆ ವರ್ಗಾಯಿಸುವುದು ಅಗತ್ಯವಾಗಿದೆ ಎಂದರು.’ ಇದು ಯಾವ ರೀತಿಯ ಅರ್ಜಿ ಮತ್ತು ನೀವು ಯಾರು?ನಿಮ್ಮ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಪೀಠವು ಹೇಳಿತು. ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಠಾಕ್ರೆ ಬಣ ಮತ್ತು ಶಿಂಧೆ ಬಣ ಸಲ್ಲಿಸಿರುವ ಅರ್ಜಿಗಳ ಕುರಿತು ತನ್ನ ತೀರ್ಪನ್ನು ಮಾ.16ರಂದು ಸರ್ವೋಚ್ಚ ನ್ಯಾಯಾಲಯವು ಕಾದಿರಿಸಿತ್ತು. ಚುನಾವಣಾ ಆಯೋಗವು ಶಿವಸೇನೆಯ ಬಿಲ್ಲು ಮತ್ತು ಬಾಣ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದ್ದು,ಪ್ರಸ್ತುತ ವಿಷಯವು ವಿಚಾರಣಾಧೀನವಾಗಿದೆ.
Next Story





