ಬಿಬಿಸಿ ಅಧ್ಯಕ್ಷ ಹುದ್ದೆಗೆ ರಿಚರ್ಡ್ ಶಾರ್ಪ್ ರಾಜೀನಾಮೆ

ಲಂಡನ್, ಎ.28: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸಾಲ ಪಡೆಯುವಲ್ಲಿ ತಮ್ಮ ಪ್ರಭಾವ ಬೀರುವ ಮೂಲಕ ಸರಕಾರದ ನಿಯಮವನ್ನು ಉಲ್ಲಂಘಿಸಿರುವ ಆರೋಪಕ್ಕೆ ಒಳಗಾಗಿರುವ ಬಿಬಿಸಿ ಅಧ್ಯಕ್ಷ ರಿಚರ್ಡ್ ಶಾರ್ಪ್ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. `ದಿ ಸಂಡೆ ಟೈಮ್ಸ್'ನಲ್ಲಿ ಈ ಕುರಿತ ವರದಿ ಪ್ರಕಟವಾದ ಬಳಿಕ ಬ್ಯಾರಿಸ್ಟರ್ ಆಡಮ್ ಹೆಪಿನ್ಸ್ಟಾಲ್ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ಸಾರ್ವಜನಿಕ ಹುದ್ದೆಗೆ ನೇಮಕಾತಿಗೆ ಸಂಬಂಧಿಸಿದ ನಿಯಮವನ್ನು ತಾನು ಉಲ್ಲಂಘಿಸಿರುವುದು ಈ ತನಿಖೆಯಲ್ಲಿ ದೃಢಪಟ್ಟಿರುವುದರಿಂದ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಶಾರ್ಪ್ ಘೋಷಿಸಿದ್ದಾರೆ. ಆದರೆ ಇದು ಉದ್ದೇಶಪೂರ್ವಕ ನಡೆದಿಲ್ಲ, ಅಚಾತುರ್ಯದ ಘಟನೆ ಎಂದೂ ತನಿಖೆಯಲ್ಲಿ ಕಂಡುಬಂದಿದೆ ಎಂದವರು ಹೇಳಿದ್ದಾರೆ. ಜಾನ್ಸನ್ಗೆ ಸಾಲ ಸುಗಮಗೊಳಿಸುವುದು, ವ್ಯವಸ್ಥೆ ಮಾಡುವುದು ಅಥವಾ ಹಣಕಾಸು ನೆರವು ಒದಗಿಸುವಲ್ಲಿ ತನ್ನ ಪಾತ್ರವಿಲ್ಲ. ಆದರೆ ಜಾನ್ಸನ್ಗೆ ಆರ್ಥಿಕ ನೆರವು ಒದಗಿಸಲು ಮುಂದೆ ಬಂದ ಉದ್ಯಮಿ ಸ್ಯಾಮ್ ಬ್ಲಿಥ್ ಹಾಗೂ ಸಂಪುಟದ ಕಾರ್ಯದರ್ಶಿ ಸೈಮನ್ ಕೇಸ್ ನಡುವೆ ಮಾತುಕತೆಗೆ ತಾನು ವ್ಯವಸ್ಥೆ ಮಾಡಿದ್ದೆ. ಈ ವಿಷಯದ ಬಗ್ಗೆ ಬಿಬಿಸಿ ನೇಮಕಾತಿ ಸಮಿತಿಗೆ ತಾನು ಮಾಹಿತಿ ನೀಡದಿರುವುದು ತನ್ನ ಪ್ರಮಾದವಾಗಿದೆ. ಆದ್ದರಿಂದ ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಎಂದು ಶಾರ್ಪ್ ಹೇಳಿದ್ದಾರೆ. ಜೂನ್ ಅಂತ್ಯದವರೆಗೆ ಹುದ್ದೆಯಲ್ಲಿ ಮುಂದುವರಿಯುವುದಾಗಿ ಅವರು ಮಾಹಿತಿ ನೀಡಿದ್ದಾರೆ.
Next Story





