ಬಿಜೆಪಿಗೆ 40 ನಂಬರ್ ಅಂದರೆ ಬಹಳ ಇಷ್ಟ, ಅವರಿಗೆ ನಲವತ್ತೇ ಸೀಟು ಕೊಡಿ: ರಾಹುಲ್ ಗಾಂಧಿ

ಕಲಬುರ್ಗಿ, ಎ. 28: ‘ಬಿಜೆಪಿಗೆ 40 ನಂಬರ್ ಅಂದರೆ ಬಹಳ ಇಷ್ಟ. ಹೀಗಾಗಿ ಬಿಜೆಪಿಗೆ ರಾಜ್ಯದ ಜನತೆ ಕೇವಲ 40 ಸ್ಥಾನಗಳನ್ನು ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ಕನಿಷ್ಟ 150 ಸ್ಥಾನಗಳನ್ನು ಗೆದ್ದು ಕರ್ನಾಟಕದಲ್ಲಿ ಸರಕಾರ ರಚನೆ ಮಾಡಲಿದೆ’ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಜಿಲ್ಲೆಯ ಜೇವರ್ಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಧರ್ಮಸಿಂಗ್ ಪರ ಧರ್ಮಸಿಂಗ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ನಾಯಕರ ಇಚ್ಚಾಶಕ್ತಿ ಕೊರತೆಯಿಂದ 371ಜೆ ವಿಧೇಯಕ ಸಮರ್ಪಕ ಜಾರಿ ಆಗಿಲ್ಲ. ರಾಜ್ಯದಲ್ಲಿ 50 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ನಾವು ಭರ್ತಿ ಮಾಡುತ್ತೇವೆ. ಐಐಟಿ ಮತ್ತು ಐಐಎಂಗಳು ಬರುವಂತೆ ನೋಡುಕೊಳ್ಳುತ್ತೇವೆ. ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ನೀತಿಯನ್ನು ಜಾರಿಗೊಳಿಸುತ್ತೇವೆ’ ಎಂದು ಆಶ್ವಾಸನೆ ನೀಡಿದರು.
ರಾಜ್ಯದಲ್ಲಿನ ಪ್ರತಿ ಗ್ರಾ.ಪಂ.ಗಳಿಗೆ 1ಕೋಟಿ ರೂ.ಅನುದಾನ ನೀಡಲಿದ್ದೇವೆ. ‘ಗ್ಯಾರೆಂಟಿ ಕಾರ್ಡ್ ಮೂಲಕ ನೀಡಲಾದ ನಾಲ್ಕು ಆಶ್ವಾಸನೆ ಮೊದಲು ಜಾರಿಗೆ ತಂದು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದ ರಾಹುಲ್ ಗಾಂಧಿ, ‘ಬಿಜೆಪಿಯ ಶೇ.40ರಷ್ಟು ಕಮಿಷನ್ ಸರಕಾರ ಜನರಿಗೆ ಕಾಂಗ್ರೆಸ್ ಪಕ್ಷದಂತಹ ಗ್ಯಾರೆಂಟಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸುರಿಯುತ್ತಿದ್ದ ಮಳೆಯ ರಾಹುಲ್ ಭಾಷಣ: ರಾಹುಲ್ ಗಾಂಧಿ ವೇದಿಕೆಗೆ ಆಗಮನಕ್ಕೂ ಮೊದಲೇ ಮಳೆಯ ಅಬ್ಬರ ತೀವ್ರವಾಗಿತ್ತು. ಇದರಿಂದ ವೇದಿಕೆ ಮುಂಭಾಗದಲ್ಲಿ ಹಾಕಿದ್ದ ಪೆಂಡಾಲ್ ಕಿತ್ತು ಹೋಯಿತು. ಹವಾಮಾನ ವೈಪರಿತ್ಯದಿಂದ ತಡವಾಗಿ ವೇದಿಕೆಗೆ ಆಗಮಿಸಿದ ರಾಹುಲ್ ಗಾಂಧಿ ಮಳೆಯ ನಡುವೆಯೇ ಜನರತ್ತ ಕೈಬಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಭಾಷಣ ಮಾಡಿದರು.







