ಮೊದಲ ಏಕದಿನ: ಝಮಾನ್ ಶತಕ, ಕಿವೀಸ್ ಕಿವಿ ಹಿಂಡಿದ ಪಾಕಿಸ್ತಾನ

ರಾವಲ್ಪಿಂಡಿ, ಎ.28: ಆರಂಭಿಕ ಬ್ಯಾಟರ್ ಫಖಾರ್ ಝಮಾನ್ ಆಕರ್ಷಕ ಶತಕದ ಸಹಾಯದಿಂದ ಪಾಕಿಸ್ತಾನ ತಂಡ ಗುರುವಾರ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ. ಪಾಕಿಸ್ತಾನ 949ನೇ ಏಕದಿನ ಪಂದ್ಯದಲ್ಲಿ 500ನೇ ಗೆಲುವು ದಾಖಲಿಸಿತು. ಎಡಗೈ ಬ್ಯಾಟರ್ ಝಮಾನ್ 9ನೇ ಶತಕ(117 ರನ್, 114 ಎಸೆತ, 13 ಬೌಂಡರಿ, 1 ಸಿಕ್ಸರ್)ಸಿಡಿಸಿ ಪಾಕಿಸ್ತಾನವು 289 ರನ್ ಗುರಿಯನ್ನು 48.3 ಓವರ್ಗಳಲ್ಲಿ ಚೇಸಿಂಗ್ ಮಾಡುವಲ್ಲಿ ನೆರವಾದರು. ಈ ಗೆಲುವಿನ ಮೂಲಕ ಪಾಕ್ ತಂಡ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ತಂಡವು ಆಲ್ರೌಂಡರ್ ಡರ್ಲ್ ಮಿಚೆಲ್ ಶತಕ(113 ರನ್, 115 ಎಸೆತ)ಹಾಗೂ ಓಪನರ್ ವಿಲ್ ಯಂಗ್ ಅರ್ಧಶತಕದ(86 ರನ್, 78 ಎಸೆತ)ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 288 ರನ್ ಸವಾಲಿನ ಮೊತ್ತ ಗಳಿಸಿತು. ಜೀವನಶ್ರೇಷ್ಠ ಬ್ಯಾಟಿಂಗ್ ಮಾಡಿದ್ದ ಮಿಚೆಲ್ ಅವರು ಯಂಗ್ ಜೊತೆಗೆ 2ನೇ ವಿಕೆಟಿಗೆ 102 ರನ್ ಸೇರಿಸಿದರು. ಬಿಗಿ ಬೌಲಿಂಗ್ನಿಂದಾಗಿ ಕಿವೀಸ್ ಅಂತಿಮ 10 ಓವರ್ಗಳಲ್ಲಿ ಕೇವಲ 66 ರನ್ ಗಳಿಸಿತು. ಪಾಕ್ ಪರ ನಸೀಮ್ ಶಾ(2-29), ಶಾಹೀನ್(2-63)ಹಾಗೂ ರವೂಫ್(2-65) ತಲಾ ಎರಡು ವಿಕೆಟ್ ಪಡೆದರು. ಗೆಲ್ಲಲು 289 ರನ್ ಗುರಿ ಬೆನ್ನಟ್ಟಿದ ಪಾಕ್ ಪರ ಇಮಾಮ್ವುಲ್ ಹಕ್(60 ರನ್, 65 ಎಸೆತ) ಹಾಗೂ ಝಮಾನ್ ಮೊದಲ ವಿಕೆಟಿಗೆ 124 ರನ್ ಜೊತೆಯಾಟ ನಡೆಸಿದರು. ಹಕ್ 15ನೇ ಅರ್ಧಶತಕ ಗಳಿಸಿ ಔಟಾದ ನಂತರ ಝಮಾನ್ ಹಾಗೂ ನಾಯಕ ಬಾಬರ್ ಆಝಂ 90 ರನ್ ಜೊತೆಯಾಟದಲ್ಲಿ ಭಾಗಿಯಾದರು. 46 ಎಸೆತಗಳನ್ನು ಎದುರಿಸಿದ್ದ ಆಝಂ ಕೇವಲ 1 ರನ್ನಿಂದ ಅರ್ಧಶತಕ ವಂಚಿತರಾದರು. ಸರಣಿಯ ಇನ್ನುಳಿದ ಪಂದ್ಯಗಳು ರಾವಲ್ಪಿಂಡಿಯಲ್ಲಿ ಶನಿವಾರ, ಕರಾಚಿಯಲ್ಲಿ ಮೇ 3,5 ಹಾಗೂ 7ರಂದು ನಡೆಯಲಿದೆ.
Next Story