ವೇಗವಾಗಿ 50 ಟೆಸ್ಟ್ ವಿಕೆಟ್ ಗಳನ್ನು ಪಡೆದು 71 ವರ್ಷ ಹಳೆಯ ದಾಖಲೆ ಮುರಿದ ಶ್ರೀಲಂಕಾದ ಸ್ಪಿನ್ನರ್ ಜಯಸೂರ್ಯ

ಕೊಲಂಬೊ, ಎ.28: ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 50 ವಿಕೆಟ್ಗಳನ್ನು ಪೂರೈಸಿದ ಸ್ಪಿನ್ನರ್ ಎನಿಸಿಕೊಂಡ ಶ್ರೀಲಂಕಾದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಬರೆದಿದ್ದಲ್ಲದೆ, ಏಳು ದಶಕಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಗಾಲೆಯಲ್ಲಿ ನಡೆದ ಐರ್ಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ನ 5ನೇ ದಿನವಾದ ಶುಕ್ರವಾರ ಪೌಲ್ ಸ್ಟಿರ್ಲಿಂಗ್(1) ವಿಕೆಟನ್ನು ಉರುಳಿಸಿದ ಜಯಸೂರ್ಯ ತಾನಾಡಿದ 7ನೇ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. 8 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ಗಳನ್ನು ಕಬಳಿಸಿದ್ದ ವೆಸ್ಟ್ಇಂಡೀಸ್ನ ದಿಗ್ಗಜ ಅಲ್ಫ್ ವಲೆಂಟೈನ್ 71 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಎಡಗೈ ಸ್ಪಿನ್ನರ್ ವಲೆಂಟೈನ್ 1951-52ರಲ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆ ತಾನಾಡಿದ 8ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಈ ದಾಖಲೆಯು 71 ವರ್ಷಗಳ ಕಾಲ ಅಳಿಯದೆ ಉಳಿದಿತ್ತು. 2022ರಲ್ಲಿ ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ 31ರ ಹರೆಯದ ಜಯಸೂರ್ಯ ಐರ್ಲ್ಯಾಂಡ್ ವಿರುದ್ಧದ ಪಂದ್ಯಕ್ಕಿಂತ ಮೊದಲು ಒಟ್ಟು 43 ವಿಕೆಟ್ ಗಳನ್ನು ಕಬಳಿಸಿದ್ದರು. ಐರ್ಲ್ಯಾಂಡ್ನ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಕಬಳಿಸಿದ್ದ ಜಯಸೂರ್ಯ 2ನೇ ಇನಿಂಗ್ಸ್ ನಲ್ಲಿ ಸ್ಟಿರ್ಲಿಂಗ್ ಹಾಗೂ ಪೀಟರ್ ಮೂರ್ ಸಹಿತ 2 ವಿಕೆಟ್ ಗಳನ್ನು ಪಡೆದಿದ್ದರು. ಜಯಸೂರ್ಯ ಟೆಸ್ಟ್ನಲ್ಲಿ 6ನೇ ಬಾರಿ ಐದು ವಿಕೆಟ್ಗಳನ್ನು ಪಡೆದರು. ಆಸ್ಟ್ರೇಲಿಯದ ವೇಗಿ ಚಾರ್ಲಿ ಟರ್ನರ್ ನಂತರ ವೇಗವಾಗಿ 50 ಟೆಸ್ಟ್ ಪಂದ್ಯಗಳನ್ನು ಪಡೆದ ಎರಡನೇ ಬೌಲರ್ ಎಂಬ ಹಿರಿಮೆಗೂ ಶ್ರೀಲಂಕಾ ಸ್ಪಿನ್ನರ್ ಪಾತ್ರರಾದರು. ಟರ್ನರ್ 1888ರಲ್ಲಿ ತನ್ನ 6ನೇ ಟೆಸ್ಟ್ ಪಂದ್ಯದಲ್ಲಿ 50 ವಿಕೆಟ್ ಗಳನ್ನು ಪಡೆದಿದ್ದರು. ತಲಾ 7 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ಗಳನ್ನು ಪಡೆದಿರುವ ಇಂಗ್ಲೆಂಡ್ ವೇಗಿ ಟಾಮ್ ರಿಚರ್ಡ್ಸನ್ ಹಾಗೂ ದಕ್ಷಿಣ ಆಫ್ರಿಕಾದ ವೇಗಿ ವೆರ್ನಾನ್ ಫಿಲ್ಯಾಂಡರ್ ಅವರೊಂದಿಗೆ ಜಯಸೂರ್ಯ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಫಿಲ್ಯಾಂಡರ್ 2012ರಲ್ಲಿ ಹಾಗೂ ರಿಚರ್ಡ್ಸನ್ 1896ರಲ್ಲಿ ಈ ಸಾಧನೆ ಮಾಡಿದ್ದರು.
Next Story