ಅಫ್ಘಾನ್ ನಲ್ಲಿ ಮಹಿಳೆಯರ ಮೇಲಿನ ನಿರ್ಬಂಧ ರದ್ದಿಗೆ ವಿಶ್ವಸಂಸ್ಥೆ ಆಗ್ರಹ ಅವಿರೋಧ ನಿರ್ಣಯ ಅಂಗೀಕಾರ

ವಿಶ್ವಸಂಸ್ಥೆ, ಎ.28: ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಏಜೆನ್ಸಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಮಹಿಳಾ ನಾಗರಿಕರ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ತಾಲಿಬಾನ್ ಅನ್ನು ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅವಿರೋಧವಾಗಿ ಅಂಗೀಕರಿಸಿದೆ.
ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲು ನಡೆದ ಸಭೆಯಲ್ಲಿ ತಾಲಿಬಾನ್ಗೆ ಸಂಬಂಧಿಸಿದ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿದೆ. ಯುಎಇ ಮತ್ತು ಜಪಾನ್ ಇತರ 90 ದೇಶಗಳ ಬೆಂಬಲದೊಂದಿಗೆ ನಿರ್ಣಯವನ್ನು ರಚಿಸಿವೆ.
ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿರುವ ರಶ್ಯದ ಪ್ರತಿನಿಧಿ ವ್ಯಾಸಿಲಿ ನೆಬೆಂಝೆಯಾ ಘೋಷಿಸಿದರು. ಮಹಿಳೆಯರು ಮತ್ತು ಹುಡುಗಿಯರಿಗೆ ಶಿಕ್ಷಣ, ಉದ್ಯೋಗ, ಚಲನೆಯ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಜೀವನದಲ್ಲಿ ಸಮಾನ ಭಾಗವಹಿಸುವಿಕೆಗೆ ಅವಕಾಶವನ್ನು ತ್ವರಿತವಾಗಿ ಮರುಸ್ಥಾಪಿಸುವಂತೆ ತಾಲಿಬಾನ್ ನಾಯಕರಿಗೆ ನಿರ್ಣಯದಲ್ಲಿ ಕರೆ ನೀಡಲಾಗಿದೆ.
ಮಹಿಳೆಯರು ಮತ್ತು ಬಾಲಕಿಯರ ಕುರಿತ ತಾಲಿಬಾನ್ ನೀತಿಗಳು ಮತ್ತು ಕ್ರಮಗಳನ್ನು ತುರ್ತಾಗಿ ಹಿಂಪಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸದಸ್ಯ ದೇಶಗಳೂ ಕಾರ್ಯನಿರ್ವಹಿಸಬೇಕು. ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸದಂತೆ ಮಹಿಳೆಯರನ್ನು ನಿಷೇಧಿಸಿರುವುದು ಈಗಾಗಲೇ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಅಫ್ಘಾನ್ನ ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ತಾಲಿಬಾನ್ ನ ನಿಷೇಧವು ಅಫ್ಘಾನ್ ಜನರನ್ನು ಬೆಂಬಲಿಸುವ, ಅಗತ್ಯ ವಸ್ತುಗಳನ್ನು ತಲುಪಿಸುವ ವಿಷಯದಲ್ಲಿ ಮತ್ತು ನಾವು ಎತ್ತಿಹಿಡಿಯಲು ಕರ್ತವ್ಯಬದ್ಧವಾಗಿರುವ ನಿಯಮಗಳು ಹಾಗೂ ತತ್ವಗಳ ನಡುವೆ ಆಘಾತಕಾರಿ ಆಯ್ಕೆಗೆ ವಿಶ್ವಸಂಸ್ಥೆಯನ್ನು ನಿರ್ಬಂಧಿಸಿದೆ ಎಂದು ವಿಶ್ವಸಂಸ್ಥೆಯ ವೆಬ್ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯರ ಮೇಲಿನ ನಿರ್ಬಂಧದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗದಂತೆ ವಿಶ್ವಸಂಸ್ಥೆಯು ಅಫ್ಘಾನ್ನಲ್ಲಿನ ತನ್ನ ಎಲ್ಲಾ ಸಿಬಂದಿಗಳಿಗೆ ಸೂಚಿಸಿದೆ. `ಈ ನಿಷೇಧವು ವಿಶ್ವಸಂಸ್ಥೆಯ ಸನದು(ಚಾರ್ಟರ್) ಸೇರಿದಂತೆ ಅಂತರಾಷ್ಟ್ರೀಯ ಕಾನೂನಿನಡಿ ಕಾನೂನುಬಾಹಿರವಾಗಿದೆ. ಈ ಕಾರಣದಿಂದ ತಾಲಿಬಾನ್ ನ ಈ ಆದೇಶಕ್ಕೆ ವಿಶ್ವಸಂಸ್ಥೆಯ ಸಹಮತವಿಲ್ಲ' ಎಂದು ಎಪ್ರಿಲ್ 11ರಂದು ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ನೆರವು ನಿಯೋಗದ ವೆಬ್ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.
ಅಫ್ಘಾನ್ನಲ್ಲಿ ಅಗತ್ಯವಿದ್ದವರಿಗೆ ತುರ್ತು ಮಾನವೀಯ ನೆರವನ್ನು ವಿತರಿಸುವ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ನಿಯೋಗದಲ್ಲಿ ಸುಮಾರು 2,700 ಸಿಬಂದಿಗಳಿದ್ದು ಇವರಲ್ಲಿ 600 ಮಹಿಳಾ ಸಿಬಂದಿಗಳು. ಇವರಿಗೆ ಎಪ್ರಿಲ್ 5ರಿಂದ ಮನೆಯಲ್ಲೇ ಇರುವಂತೆ ವಿಶ್ವಸಂಸ್ಥೆ ಸೂಚಿಸಿದೆ.
ಅಫ್ಘಾನಿಸ್ತಾನಕ್ಕೆ ಸಂಬಂಧಿಸಿ ಮೇ 1 ಮತ್ತು 2ರಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಖತರ್ನಲ್ಲಿ ಅಂತಾರಾಷ್ಟ್ರೀಯ ಸಭೆಯನ್ನು ನಡೆಸಲಿದ್ದಾರೆ. ಪ್ರಮುಖ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಈ ಸಭೆಯಲ್ಲಿ ಅಫ್ಘಾನ್ನ ಭವಿಷ್ಯದ ದಾರಿಯ ಬಗ್ಗೆ ವಿಸ್ತøತ ಚರ್ಚೆ ನಡೆಯಲಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಕಾರ್ಯಾಚರಣೆಯ ವಿಮರ್ಶಾ ಅವಧಿ
ಈ ಮಧ್ಯೆ, ತಾಲಿಬಾನ್ ಗಳ ಕ್ರಮಗಳನ್ನು ಗಮನಿಸುವ ನಿಟ್ಟಿನಲ್ಲಿ ಅಫ್ಘಾನ್ ಗೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ರೋಝಾ ಒಟುನ್ಬಯೆವ `ಕಾರ್ಯಾಚರಣೆ ವಿಮರ್ಶಾ ಅವಧಿ'ಯನ್ನು ಪ್ರಾರಂಭಿಸಿದ್ದು ಇದು ಮೇ 5ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ವಿಶ್ವಸಂಸ್ಥೆಯ ವಕ್ತಾರರನ್ನು ಉಲ್ಲೇಖಿಸಿದ ಎಎಫ್ಪಿ ವರದಿ ಹೇಳಿದೆ.
ಈ ಅವಧಿಯಲ್ಲಿ, ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆ ನಿಯೋಗವು ಅಗತ್ಯವಿರುವ ಸಮಾಲೋಚನೆ ನಡೆಸುವ ಜತೆಗೆ, ಅಗತ್ಯವಿರುವ ಕಾರ್ಯಾಚರಣೆಯ ಹೊಂದಿಕೆ ಮಾಡಲಿದೆ ಮತ್ತು ಎಲ್ಲಾ ಸಂಭವನೀಯ ಫಲಿತಾಂಶಗಳಿಗೆ ತುರ್ತು ನಿರ್ವಹಣೆ ಯೋಜನೆಯನ್ನು ರೂಪಿಸಲಿದೆ. ತಾಲಿಬಾನ್ನ ಉನ್ನತ ಮುಖಂಡರ ಜತೆ ಎಲ್ಲಾ ಸಂಭಾವ್ಯ ಹಂತಗಳಲ್ಲಿ ತಾತ್ವಿಕ ಮತ್ತು ರಚನಾತ್ಮಕ ಸಂವಾದ ನಡೆಸಲಾಗುವುದು ಎಂದು ಹೇಳಿಕೆ ತಿಳಿಸಿದೆ.







