ಸಾಮಾಜಿಕ ವಿಕಾಸಕ್ಕೆ ಪೂರಕವಾದ ವಿಚಾರಗಳು ಪಕ್ಷಗಳ ಪ್ರಣಾಳಿಕೆಯಲ್ಲಿರಲಿ: ಬಂಜಗೆರೆ ಜಯಪ್ರಕಾಶ್
ವಾರ್ತಾಭಾರತಿಯಲ್ಲಿ ಪ್ರಕಟಿತ ಸರಣಿ ‘ಜನ ಪ್ರಣಾಳಿಕೆ’ ಲೋಕಾರ್ಪಣೆ

ಬೆಂಗಳೂರು, ಎ. 28: ‘ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ದೃಷ್ಟಿಕೋನವನ್ನು ಗಮನಿಸಿದರೆ ಅವುಗಳ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಜನರ ಬದುಕಿನ ವಾಸ್ತವ ಸಂಗತಿಗಳನ್ನು ಬಿಟ್ಟು ಕೇವಲ ಭಾವನಾಕತ್ಮಕ ವಿಚಾರಗಳು ಮತ್ತು ಕೊಡುಗೆಗಳ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಅಪಾಯಕಾರಿ ಸಂಗತಿ’ ಎಂದು ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.
ಶುಕ್ರವಾರ ಕ್ರಿಯಾ ಪ್ರಕಾಶನದಿಂದ ಹೊರತಂದಿರುವ, ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟವಾದ ವಿವಿಧ ಲೇಖಕರ ‘ಜನ ಪ್ರಣಾಳಿಕೆ-2023’ ಕೃತಿಯನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜನಸಾಮಾನ್ಯರ ಆರ್ಥಿಕ, ಸಾಮಾಜಿಕ ವಿಕಾಸಕ್ಕೆ ಸಂಬಂಧಿಸಿದ ವಿಚಾರಗಳನ್ನು ಬದಿಗಿಟ್ಟು ಕೇವಲ ಭಾವನಾತ್ಮಕ ವಿಚಾರಗಳನ್ನು ಪ್ರಣಾಳಿಕೆಗಳಲ್ಲಿ ಮುನ್ನಲೆಗೆ ತರುವುದು ಸರಿಯಲ್ಲ ಎಂದರು.
‘ಹಿಜಾಬ್, ಹಲಾಲ್ ಮುಂತಾದ ವಿಷಯಗಳನ್ನು ಮುನ್ನೆಲೆಗೆ ತರಲಾಗಿದೆ. ಇವು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುತ್ತವೆಯೇ? ಎಂದು ಪ್ರಶ್ನಿಸಿದ ಬಂಜಗೆರೆ ಜಯಪ್ರಕಾಶ್, ರಾಜಕೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳನ್ನು ಹಣಬಲದ ಆಧಾರದ ಮೇಲೆ ಕಣಕ್ಕೆ ಇಳಿಸುತ್ತವೆ. ಅಭ್ಯರ್ಥಿಗಳ ಅಪರಾಧದ ಹಿನ್ನೆಲೆ, ಜನರ ಮೇಲೆ ಅವರಿಗೆ ಇರುವ ಕಾಳಜಿಯನ್ನು ಪರಿಗಣಿಸುತ್ತಿಲ್ಲ. ಜನರ ಪ್ರಣಾಳಿಕೆ ಜನತೆಯ ಪರವಾಗಿ ಚಿಂತಕರಿಂದ ಬಂದಿದೆ’ ಎಂದು ಹೇಳಿದರು.
ಜನ ಪ್ರಣಾಳಿಕೆ ಕರ್ನಾಟಕ ಕಟ್ಟಲು ಸಹಾಯಕ: ‘ರಾಜಕೀಯ ಪಕ್ಷಗಳ ಪ್ರಣಾಳಿಕೆ ಚುನಾವಣೆ ಮುಗಿದ ತಕ್ಷಣ ಮುಗಿದು ಹೋಗುತ್ತದೆ. ಕೆಲ ಪಕ್ಷಗಳು ಪ್ರಣಾಳಿಕೆಯಲ್ಲಿ ಹೇಳಿದ ವಿಚಾರಗಳನ್ನು ಅನುಷ್ಟಾನ ಮಾಡುತ್ತವೆ. ಆದರೆ ನಮ್ಮ ‘ಜನ ಪ್ರಣಾಳಿಕೆ’ಯು ಹಲವು ವರ್ಷಗಳ ವರೆಗೆ ಕರ್ನಾಟಕ ರಾಜ್ಯವನ್ನು ಕಟ್ಟಲು ಸಹಾಯ ಮಾಡಲಿದೆ ಎಂದು ಕೃತಿ ಬಿಡುಗಡೆ ಮಾಡಿದ ಜೆಎನ್‌ಯುನ ನಿವೃತ್ತ ಪ್ರಾಧ್ಯಾಪಕ ಡಾ. ಪುರುಶೋತ್ತಮ ಬಿಳಿಮಲೆ ತಿಳಿಸಿದರು.
ಚಿಂತಕಿ ಡಾ.ಎಚ್.ಜಿ.ಜಯಲಕ್ಷ್ಮಿ, ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ ಸೇರಿದಂತೆ ಇನ್ನಿತರರು ಜನ ಪ್ರಣಾಳಿಕೆ ಕುರಿತಂತೆ ಮಾತನಾಡಿದರು.







