ಬಜ್ಪೆ: ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ಇಬ್ಬರು ಲಾರಿ ಚಾಲಕರ ವಶಕ್ಕೆ

ಬಜ್ಪೆ, ಎ.28: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಸಾದೂರು ಎಂಬಲ್ಲಿರುವ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಇಬ್ಬರು ಲಾರಿ ಚಾಲಕರನ್ನು ವಶಕ್ಕೆ ಪಡೆದ ಪೊಲೀಸರು ಅಪಾರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮೀಯಾರ್ ಗ್ರಾಮದ ಶೇಖ್ ನದೀಮ್ (26), ಹೊಸಮಾರ್ ಕಾರ್ಕಳ ನಿವಾಸಿ ಮಹಮ್ಮದ್ ಇರ್ಪಾನ್ (23) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ 2 ಟಿಪ್ಪರ್ ಲಾರಿಗಳು, ಸುಮಾರು 2 ಯುನಿಟ್ ನಷ್ಟು ಮರಳು ತುಂಬಿದ್ದ ಕಬ್ಬಿಣದ ಬೋಟ್, 2 ಮರದ ಹಲಗೆಗಳು, 2 ನೀರಿನ ಕ್ಯಾನ್ ಗಳು, 2 ಹಾರೆ, ಬಿದಿರಿನ ಹುಟ್ಟು, ನದಿ ದಡದಲ್ಲಿ ಸುಮಾರು 50 ಬುಟ್ಟಿಯಷ್ಟು ಮರಳು, 10 ಪ್ಲಾಸ್ಟಿಕ್ ಬುಟ್ಟಿ, 2 ಮೊಬೈಲ್ ಫೋನ್ ಸೇರಿದಂತೆ ಒಟ್ಟು 31.14 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾತ್ರಿ ಗಸ್ತಿನಲ್ಲಿದ್ದ ವೇಳೆ ಪೊಲೀಸ್ ಆಯುಕ್ತರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ ಆರೋಪಿಗಳ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Next Story