ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗದಿದ್ದರೆ ಮತ್ತೆ ಓಟು ಕೇಳಲು ಬರುವುದಿಲ್ಲ : ರಮಾನಾಥ ರೈ

ಬಂಟ್ವಾಳ : ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ, ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು, ಒಂದು ವೇಳೆ ಈ ಯೋಜನೆಗಳನ್ನು ಜಾರಿಗೊಳಿಸದೆ ಇದ್ದಲ್ಲಿ ಮುಂದೆ ನಾನು ನಿಮ್ಮಲ್ಲಿ ವೋಟು ಕೇಳಲು ಬರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಖಚಿತ ಭರವಸೆ ನೀಡಿದರು. ಬಂಟ್ವಾಳ ಬ್ಲಾಕ್ ನ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ ಮತ್ತು ನಿಂಗಲ್ ಬಾಕಿಮಾರ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಪರಿಹಾರವಾಗಿ ಗೃಹಿಣಿಯರಿಗೆ ರೂ. 2,000 ಗೃಹಲಕ್ಷ್ಮಿ ಯೋಜನೆಯ ಮೂಲಕ ನೀಡಲಾಗುತ್ತದೆ, 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಭತ್ಯೆ, ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕಾಂಗ್ರೆಸ್ ಗ್ಯಾರಂಟಿಗಳಾಗಿವೆ. ಇದೀಗ ಹೊಸದಾಗಿ ಇನ್ನೊಂದು ಯೋಜನೆ ನಮ್ಮ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಆ ಯೋಜನೆಯ ಪ್ರಕಾರ ಎಲ್ಲಾ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನೂ ಕಾಂಗ್ರೆಸ್ ನೀಡಲಿದೆ ಎಂದು ರೈ ತಿಳಿಸಿದರು. ಬಂಟ್ವಾಳದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ಅಪ ಪ್ರಚಾರ, ಸುಳ್ಳು ವದಂತಿಗಳ ಮೂಲಕ ಸೋಲಿಸಲಾಯಿತು. ಆದರೆ ಕಳೆದ ಅವಧಿಯಲ್ಲಿ ಬಿಜೆಪಿ ಆಡಳಿತ ನೋಡಿದ್ದೀರಿ. ಇಬ್ಬರ ಆಡಳಿತ ತುಲನೆ ಮಾಡಿ ಈ ಬಾರಿ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲಿಸಿ ಎಂದು ಅವರು ವಿನಂತಿಸಿದರು. ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮುಖಂಡರುಗಳಾದ ಅಶ್ವನಿ ಕುಮಾರ್ ರೈ, ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಪ್ರಮುಖರುಗಳಾದ ಪ್ರಕಾಶ್ ಕುಮಾರ್ ಜೈನ್, ಸುದರ್ಶನ್ ಜೈನ್, ಕೃಷ್ಣಪ್ಪ ಕುಲಾಲ್, ದೇವಪ್ಪ ಕುಲಾಲ್, ಅರುಣ್ ಐತಾಳ್, ಕೃಷ್ಣಪ್ಪ ಪೂಜಾರಿ, ವಿಶ್ವನಾಥ ಶೆಟ್ಟಿ, ದಿನೇಶ್ ಶೆಟ್ಟಿ, ಸದಾನಂದ ಶೆಟ್ಟಿ, ಪದ್ಮಾವತಿ ಪೂಜಾರಿ, ಕೇಶವ ಪೂಜಾರಿ, ವಾಸು ಪೂಜಾರಿ, ವಿಶ್ವನಾಥ ಗೌಡ, ರಾಜೇಶ್ ಗೌಡ, ರವಿ ಆರ್ ಪೂಜಾರಿ, ವಿಕ್ಟರ್ ಪಾಯಸ್, ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
Next Story