ರೈತರ ಹಕ್ಕೊತ್ತಾಯಗಳು:ಸಂತೆಗೆ ಮೂರು ಮೊಳ

ಚಾಲಕನೇ ಬೇಕಿಲ್ಲದೆ ಜಮೀನಿನಲ್ಲಿ ಚಲಿಸಿ, ಉಳುಮೆ-ಬಿತ್ತನೆ ಮಾಡುವ, ನೀರು-ಗೊಬ್ಬರ ಸಿಂಪಡಿಸುವ, ಕಳೆ ಕೀಳುವ, ಕಟಾವು ಮಾಡುವ ಟ್ರ್ಯಾಕ್ಟರ್ ನಮ್ಮ ಇಂದಿನ ಮತ್ತು ನಾಳಿನ ರೈತರ ದುಃಸ್ವಪ್ನದ ದೃಷ್ಯಿಕೆಯಾಗಿರುವ ಸಮಯದಲ್ಲಿ, ನಮ್ಮ ರೈತ ಸಂಘಟನೆಗಳು ಒಗ್ಗೂಡಿ ಆತ್ಮಾವಲೋಕನ, ಅಧ್ಯಯನಕ್ಕೆ ಮುಂದಾಗಬೇಕು.
ನಿನ್ನೆಯವರೆಗೂ ತೂಕಡಿಸುತ್ತಿದ್ದ ಕರ್ನಾಟಕದ ಅಸಂಖ್ಯ ರೈತ ಸಂಘಟನೆಗಳು ರಾಜ್ಯದಲ್ಲಿ ಚುನಾವಣೆ ಅಧಿಸೂಚನೆ ಹೊರಬೀಳುತ್ತಿದ್ದಂತೆಯೇ ದಡಬಡಾಯಿಸಿ ಕೊಂಡು ಎದ್ದು ತಮಗೇನು ಬೇಕು ಎಂದು ನಿದ್ದೆಗಣ್ಣಲ್ಲೇ ಒಂದಷ್ಟು ಗೀಚಿ ಪಟ್ಟಿಮಾಡಿಕೊಂಡು ತಮ್ಮ ಸಂಯುಕ್ತ ‘‘ಹಕ್ಕೊತ್ತಾಯಗಳು’’ ಎಂದು ವಿವಿಧ ಪಕ್ಷಗಳ ಮುಂದೆ ಇಟ್ಟಿವೆ. ಈ ಪಟ್ಟಿಯನ್ನು ನಿರಪೇಕ್ಷ ದೃಷ್ಟಿಯಿಂದ ಕಣ್ಣಾಡಿಸುವಾಗ ಇವು ಹಕ್ಕೊತ್ತಾಯಗಳಲ್ಲ, ಬೇಡಿಕೆಗಳಷ್ಟೇ ಎನಿಸುವುದು ನಿಜ. ಅದರ ಜೊತೆಗೆ ಮತ್ತೊಮ್ಮೆ ಸಾಬೀತಾಗಿದ್ದು ಏನೆಂದರೆ, ನಮ್ಮದೇ ನೆಲದ ಕೃಷಿ ವಲಯಗಳ ಕಟುಸತ್ಯಗಳನ್ನು ಕಾಣಲಾರದೆ ಹೋಗಿರುವ ನಮ್ಮ ರೈತ ಸಂಘಟನೆಗಳ ವಿಷಯ ವಿಸ್ತಾರದ ಕೊರತೆ ಮತ್ತು ನಾಲ್ಕೈದು ವರ್ಷಗಳ ಆಚಿನ ಮುಂಗಾಣ್ಕೆಯ ಕೊರತೆ.
ಒಣಭೂಮಿ ಕೃಷಿ, ಆದಿವಾಸಿಗಳ ಅರಣ್ಯ ಹಕ್ಕು ಹಾಗೂ ಕೃಷಿ, ಸಿರಿಧಾನ್ಯ ಕೃಷಿ ಮತ್ತು ಕೃಷಿಕೂಲಿ ಕಾರ್ಮಿಕರ ಸಮಸ್ಯೆಗಳ ಬಗೆಗೆ ರೈತ ಚಳವಳಿಯ ಚಾರಿತ್ರಿಕ ದಿವ್ಯಮೌನ ತಿಳಿದ ವಿಚಾರವೇ. ಈವರೆಗಿನ ಕರ್ನಾಟಕದ ರೈತ ಚಳವಳಿಯಲ್ಲಿ ಕಂಡ ನೀರಾವರಿ ವಿಸ್ತರಣೆ, ಬಗರ್ ಹುಕುಂ, ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಉಚಿತ ಕರೆಂಟು, ಕಬ್ಬಿನ ಬಾಕಿ ಪಾವತಿ, ಮುಂತಾದ ದಶಕಗಳ ಬೇಡಿಕೆಗಳು ಈ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿವೆಯೇ ಹೊರತು ಅಲ್ಲಿಂದ ಮುಂದಕ್ಕೆ ಚಳವಳಿ ವಿಸ್ತರಿಸಿಕೊಳ್ಳುವ ಆಸಕ್ತಿಯನ್ನೇ ತೋರಿಲ್ಲ. ಇವು ಅಮುಖ್ಯ ಎಂದಲ್ಲ. ಆದರೆ ಈ ದಿನ ಕೃಷಿ ಸಂಕಷ್ಟಗಳು ಅಲ್ಲಿಗೇ ನಿಂತಿಲ್ಲ. ಸಾಂಘಿಕ ಒಡಕುಗಳು, ಜಾಗತಿಕ ಮತ್ತು ರಾಷ್ಟ್ರೀಯ ವಿದ್ಯಮಾನಗಳು, ಕೃಷಿ ನೀತಿಗಳು ನಮ್ಮ ಕೃಷಿಯನ್ನು ಹೇಗೆ ಪ್ರಭಾವಿಸುತ್ತಿವೆ ಎನ್ನುವ ಅಧ್ಯಯನ ಮತ್ತು ಆ ಪ್ರಭಾವಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವ ಸಾಮೂಹಿಕ ಆಲೋಚನೆ ಮತ್ತು ಕಾರ್ಯನೀತಿ ಇಲ್ಲದಿರುವುದು ಚಳವಳಿಯ ನ್ಯೂನತೆಗಳಲ್ಲಿ ಕೆಲವಿರಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಕಾಣುತ್ತಿರುವುದು ಇಂದು ಹೊಸ ತಲೆಮಾರಿನ ಅಧ್ಯಯನಶೀಲ ಯುವ ಕೃಷಿಕರು ರೈತ ಚಳವಳಿಯಲ್ಲಿ ಇಲ್ಲದಿರುವುದು. ರೈತಾಪಿಯೇ ನಷ್ಟದ ಉದ್ಯೋಗ ಎಂದು ಸರಕಾರಗಳೂ, ತಂದೆತಾಯಿಯರೂ ಮಕ್ಕಳನ್ನು ಕೃಷಿಯಿಂದ ಹೊರದಬ್ಬುತ್ತಿರುವಾಗ ಅವರಾದರೂ ಹೇಗೆ ಬಂದಾರು? ದೇಶದಲ್ಲಿ ಕೃಷಿಯನ್ನು, ಕೃಷಿಯಾಧಾರಿತ ಕಸುಬುಗಳನ್ನು ಅವಲಂಬಿಸಿರುವ ದೊಡ್ಡ ಜನಸಂಖ್ಯೆಯನ್ನು ಕಡಿಮೆ ಮಾಡಬೇಕು, ಅವರನ್ನು ನಗರ ಪ್ರದೇಶ ಗಳಿಗೆ ವರ್ಗಾಯಿಸಬೇಕು ಎನ್ನುವ ವರ್ಲ್ಡ್ ಬ್ಯಾಂಕ್ ಮತ್ತು ಐಎಮ್‌ಎಫ್ ನಿರ್ದೇಶಿತ ನೀತಿಗಳನ್ನು ನಾಲ್ಕು ದಶಕಗಳಿಂದ ಯಥಾವತ್ ಪಾಲಿಸುತ್ತಿರುವ ಪ್ರಭುತ್ವಗಳು ಈಗಾಗಲೇ ಸುಮಾರು ಅರ್ಧದಷ್ಟು ಗ್ರಾಮೀಣ ಯುವಕರನ್ನು ಕೃಷಿಯಿಂದ ಹೊರದಬ್ಬಿವೆ. ಈ ಯುವಕರೂ ಸಮರ್ಪಕ ಶಿಕ್ಷಣ, ಉದ್ಯೋಗ ಭದ್ರತೆ ಇಲ್ಲದೆ ತ್ರಿಶಂಕುಸ್ಥಿತಿಯಲ್ಲಿ ಸೊರಗುತ್ತಿರುವುದನ್ನು ದಿನವೂ ಕಾಣುವುದಾಗಿದೆ.
ಒಕ್ಕೂಟ ಸರಕಾರ ಮೂರು ವಿವಾದಿತ ಕೃಷಿ ಕಾನೂನುಗಳನ್ನು ತರುವುದಕ್ಕೆ ಮುಂಚೆಯೇ ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎಪಿಎಮ್‌ಸಿ ಕಾಯ್ದೆ ಮತ್ತು ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರಲಾಯಿತು. ಆಗ ನಮ್ಮ ರೈತ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆಗಳನ್ನು ದಾಖಲಿಸಿದವೇ ಹೊರತು ಗಟ್ಟಿ ಹೋರಾಟ ಕಟ್ಟಲಿಲ್ಲ. ಕರಡು ಬೀಜ ಮಸೂದೆ 2019ರಲ್ಲಿ ‘ರೈತ’ ಎನ್ನುವ ವಾಖ್ಯಾನವನ್ನೇ ಬದಲಿಸಿದರೂ ನಮ್ಮಲ್ಲಿ ಅದಕ್ಕೆ ಪ್ರತಿರೋಧ ಇರಲಿಲ್ಲ. ಆ ನಂತರದಲ್ಲಿ ದಿಲ್ಲಿಯಲ್ಲಿ ನಡೆದ ಚಾರಿತ್ರಿಕ ಹೋರಾಟದಲ್ಲಿ ಕರ್ನಾಟಕದ ರೈತರ ಭಾಗವಹಿಸುವಿಕೆ ಎದ್ದು ಕಾಣಲಿಲ್ಲ. ದಿಲ್ಲಿ ದೂರವಿದೆ ಎಂದುಕೊಂಡರೂ, ಅದೇ ಸಮಯದಲ್ಲಿ ಇಲ್ಲಿಯೇ ಒಂದು ನಿರಂತರ ಧರಣಿಯನ್ನಾದರೂ ಹಮ್ಮಿಕೊಳ್ಳಬಹುದಿತ್ತು. ಗೋಹತ್ಯೆ ನಿಷೇಧ ಕಾಯ್ದೆಗೂ ಇಲ್ಲಿಯ ಪ್ರತಿಕ್ರಿಯೆ ತಣ್ಣಗಿತ್ತು. ತಣ್ಣನೆಯ, ಅರೆಮನಸ್ಸಿನ ಪ್ರತಿಕ್ರಿಯೆಗಳೂ ಒಪ್ಪಿಗೆಯನ್ನೇ ಸೂಚಿಸಬಹುದು ಎನ್ನುವ ಎಚ್ಚರ ನಮ್ಮ ರೈತ ಸಂಘಟನೆಗಳಿಗೆ ಇರಬೇಕಿತ್ತು.
ಇಂದು ದೇಶದ, ಅದರಲ್ಲೂ ರಾಜ್ಯದ ಕೃಷಿಕ್ಷೇತ್ರವನ್ನು ಕಾಡುತ್ತಿರುವ, ನಾಳೆ ಕಾಡುವ ದೈತ್ಯ ಸಮಸ್ಯೆಗಳು ಒಂದೆರಡಲ್ಲ. ಕೆಲವನ್ನು ಮಾತ್ರ ಇಲ್ಲಿ ಚರ್ಚೆಗೆ ಇಡುತ್ತೇನೆ.
1. ಎಪಿಎಮ್‌ಸಿ ತಿದ್ದುಪಡಿ ರದ್ದುಪಡಿಸಿ, ಆ ವ್ಯವಸ್ಥೆಯಲ್ಲಿ ದಶಕಗಳಿಂದಲೂ ಇರುವ ನ್ಯೂನತೆಗಳನ್ನು ಸರಿಪಡಿಸಿ, ಬಲಪಡಿಸಬೇಕೆನ್ನುವ ನಿಟ್ಟಿನಲ್ಲಿ ರೈತ ಚಳವಳಿ ಸಾಗಬೇಕು. ಸಹಕಾರಿ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿ ಕೃಷಿ ಕಬಳಿಸುವುದನ್ನು ತಡೆಯುವುದಕ್ಕೆ ಇರುವ ಮೂಲಶಕ್ತಿ ಇದು. ಅದು ಬಿಟ್ಟು ಬರೀ ಕನಿಷ್ಠ ಬೆಂಬಲ ಬೆಲೆ ನಿಗದಿಗಾಗಿ ಎತ್ತುವ ದನಿ ಏನೂ ಸಾಲದಾಗುತ್ತದೆ. ಈ ಬಗ್ಗೆ ಈ ಹಕ್ಕೊತ್ತಾಯಗಳು ಮೆಲುದನಿಯಲ್ಲಿ ಹೇಳಿವೆ.
2. ಭೂಸುಧಾರಣೆ ತಿದ್ದುಪಡಿ ಮತ್ತು ಡೇರಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜಾನುವಾರು ನಿಷೇಧ ಕಾಯ್ದೆಯ ಬಗ್ಗೆಯೂ ಮೌನದ ಹೊದಿಕೆಯ ಮೆಲ್ಲುಸಿರು.
3. 1951ರ ಅಪರಿಮಿತ ದಾಸ್ತಾನು ನಿಷೇಧ ಕಾಯ್ದೆಯನ್ನು ತಿದ್ದಿ, ಯಾರು ಎಷ್ಟು ಬೇಕಾದರೂ ದಾಸ್ತಾನು ಮಾಡಬಹುದು ಎನ್ನುವ ಕಾಯ್ದೆಯನ್ನು ಒಕ್ಕೂಟ ಸರಕಾರ ತಂದಿತು. ದಿಲ್ಲಿ ಹೋರಾಟ ಅದನ್ನು ಹಿಮ್ಮೆಟ್ಟಿಸಿತ್ತಾದರೂ, ಇಂದಿಗೂ ಅದು ಕಾಗದದ ಮೇಲೆಯೇ ಉಳಿದಿದೆ. ಈ ಕಾರಣಕ್ಕಾಗಿಯೇ, ಕೆಲವು ಬೆಳೆಗಳನ್ನು ಹೊರತುಪಡಿಸಿ, ರೈತರ ವಿವಿಧ ಬೆಳೆಗಳ ಬೆಲೆಗಳು ಕಟಾವು ಸಮಯದಲ್ಲಿ ಕುಸಿಯುತ್ತಿವೆ. ಇಂದಿಗೂ ಕರ್ನಾಟಕದಲ್ಲಿ ಬೆಳೆಗಳ ವೈವಿಧ್ಯತೆ ತಕ್ಕ ಮಟ್ಟಿಗೆ ಇದೆ ಎನ್ನುವ ಹಿನ್ನೆಲೆಯಲ್ಲಿ ಅಪರಿಮಿತ ದಾಸ್ತಾನಿಗೆ ಅವಕಾಶ ನೀಡುವ ಕಾಯ್ದೆಯನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ.
4. ಕಾರ್ಪೊರೇಟ್ ಒಳಸುರಿಗಳ ಕೃಷಿ ಭೂ ಫಲವತ್ತತೆಯ ಮೇಲೆ, ಕೃಷಿ ಸಾರ್ವಭೌಮತ್ವದ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ಜಾಗತಿಕ ತಾಪಮಾನ ಹೆಚ್ಚಳಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ. ಈ ವಿಚಾರಗಳನ್ನು ನಮ್ಮ ರೈತರು ತುರ್ತಾಗಿ ಕಾಣಬೇಕಿದೆ.
5. ಕಾರ್ಪೊರೇಟ್ ಸಂಸ್ಥೆಗಳು ಕೃಷಿ ತಂತ್ರಜ್ಞಾನದ ಹೊಸಹೊಸ ಆವಿಷ್ಕಾರಗಳನ್ನು, ಕೃತಕ ಬುದ್ಧಿಮತ್ತೆಯನ್ನು ದೇಶದ ಕೃಷಿಗೆ ‘ಇವು ಅನಿವಾರ್ಯ’ ಎನ್ನುವಂತೆ ಪರಿಚಯಿಸುತ್ತಿವೆ. ಸಣ್ಣ ಮತ್ತು ಅತಿಸಣ್ಣ ರೈತರನ್ನು ಬಿಡಿ, ಮಧ್ಯಮ ಗಾತ್ರದ ಭೂಹಿಡುವಳಿಯ ರೈತನಿಗೂ ಆ ತಂತ್ರಜ್ಞಾನಗಳು ಕೈಗೆಟಕುವಂತೆ ಇಲ್ಲ. ಕೈಗೆಟುಕದ ತಂತ್ರಜ್ಞಾನವನ್ನು ಕೃಷಿಗೆ ಅನಿವಾರ್ಯ ಎನ್ನುವಂತೆ ಮಾಡಿ, ಮುಂದಿನ ಒಂದೆರಡು ದಶಕಗಳಲ್ಲಿ ರೈತರಿಂದ ಕೃಷಿಯನ್ನು ಕಿತ್ತುಕೊಳ್ಳುವ ಕಾರ್ಪೊರೇಟ್ ಹುನ್ನಾರವೇ ಇದರ ಹಿಂದಿರುವ ಉದ್ದೇಶ ಎಂದು ಇಂದೇ ರೈತರು ಅರ್ಥಮಾಡಿಕೊಳ್ಳಬೇಕಿದೆ. ದೊಡ್ಡ ಮಾನವ ಸಂಪನ್ಮೂಲವಿರುವ ನಮ್ಮ ದೇಶದಲ್ಲಿ ಇಂತಹ ತೀರಾ ತುಟ್ಟಿ ತಂತ್ರಜ್ಞಾನಗಳ ಅವಶ್ಯಕತೆ ಎಷ್ಟಿದೆ, ಅದರಿಂದ ಆಗುವ ಲಾಭನಷ್ಟಗಳೇನು ಎನ್ನುವ ಬಗ್ಗೆ ನಾವು ಚರ್ಚಿಸಬೇಕಲ್ಲವೇ?
6. ಭಾರತದ ಪ್ರೇರಣೆಯ ಮೇರೆಗೆ 2023ನ್ನು ವಿಶ್ವಸಂಸ್ಥೆ ‘‘ಅಂತರ್‌ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’’ ಎಂದು ಆಚರಿಸುತ್ತಿದೆ. ನಮ್ಮ ಸಿರಿಧಾನ್ಯ ಕೃಷಿಕರಿಗೆ ಇದರಿಂದ ಹೇಗೆ ಅನುಕೂಲವಾಗಲಿದೆ, ನಮ್ಮ ದೇಶದ ನೀತಿ ಏನಿದೆ ಎಂದು ಸಂಘಟನೆಗಳು ಯೋಚಿಸಬೇಕಿದೆ.
ಒಬ್ಬ ಮನುಷ್ಯ ಕೂಡ ಜಮೀನಿನೊಳಕ್ಕೆ ಇಳಿಯದೆ ಪೂರ್ತಿಯಾಗಿ ಯಂತ್ರ ಮತ್ತು ತಂತ್ರಜ್ಞಾನದ ಸಹಾಯದಿಂದ ಮಾಡಬಹುದಾದ ಕೃಷಿಯನ್ನು ಇಂಗ್ಲೆಂಡಿನ ಹಾರ್ಪರ್ ಆಡಮ್ಸ್ ವಿಶ್ವವಿದ್ಯಾನಿಲಯ 2016ರಲ್ಲೇ ಅಭಿವೃದ್ಧಿ ಪಡಿಸಿದೆ. ಸ್ವಯಂಚಾಲಿತ ಕಟಾವು, ಒಟ್ಟುವಿಕೆ, ಸಂಗ್ರಹಣೆ ಮಾಡುವ, ಹಣ್ಣುಗಳನ್ನು ಕೀಳುವ, ಪ್ಯಾಕಿಂಗ್ ಮಾಡುವ ಎಐ ಆಧಾರಿತ ತಂತ್ರಜ್ಞಾನದ ಯಂತ್ರಗಳು ಈಗಾಗಲೇ ವಿಶ್ವದ ಕೆಲವೆಡೆ ಬಂದಿವೆ. ನಾಳೆ ಅವು ನಮ್ಮಲ್ಲೂ ಬರಲಾರವೇ? ಚಾಲಕನೇ ಬೇಕಿಲ್ಲದೆ ಜಮೀನಿನಲ್ಲಿ ಚಲಿಸಿ, ಉಳುಮೆ-ಬಿತ್ತನೆ ಮಾಡುವ, ನೀರು-ಗೊಬ್ಬರ ಸಿಂಪಡಿಸುವ, ಕಳೆ ಕೀಳುವ, ಕಟಾವು ಮಾಡುವ ಟ್ರ್ಯಾಕ್ಟರ್ ನಮ್ಮ ಇಂದಿನ ಮತ್ತು ನಾಳಿನ ರೈತರ ದುಃಸ್ವಪ್ನದ ದೃಷ್ಯಿಕೆಯಾಗಿರುವ ಸಮಯದಲ್ಲಿ, ನಮ್ಮ ರೈತ ಸಂಘಟನೆಗಳು ಒಗ್ಗೂಡಿ ಆತ್ಮಾವಲೋಕನ, ಅಧ್ಯಯನಕ್ಕೆ ಮುಂದಾಗಬೇಕು.







