ವಿದೇಶಿ ವಿನಿಮಯ ಉಲ್ಲಂಘನೆ ಆರೋಪ: ಬೈಜೂಸ್ ಸಿಇಒ ರವೀಂದ್ರನ್ ಅವರ ಮನೆ, ಕಚೇರಿಗಳಲ್ಲಿ ಈಡಿ ಶೋಧ

ಹೊಸದಿಲ್ಲಿ: ವಿದೇಶಿ ವಿನಿಮಯ ಉಲ್ಲಂಘನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು(ಈಡಿ) ಶನಿವಾರ ಬೆಂಗಳೂರು ಮೂಲದ ಎಡ್-ಟೆಕ್ ಸಂಸ್ಥೆ BYJU ನ ಸಿಇಒ ಬೈಜು ರವೀಂದ್ರನ್ ಅವರ ಮನೆ, ಕಚೇರಿಗಳಲ್ಲಿ ಶೋಧ ನಡೆಸಿತು ಎಂದು NDTV ವರದಿ ಮಾಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ನಿಬಂಧನೆಗಳ ಅಡಿಯಲ್ಲಿ ರವೀಂದ್ರನ್ ಹಾಗೂ ಅವರ ಕಂಪನಿ 'ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್' ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಬೆಂಗಳೂರಿನ ಎರಡು ವ್ಯಾಪಾರ ಹಾಗೂ ಒಂದು ವಸತಿ ಕಟ್ಟಡವನ್ನು ಶೋಧಿಸಿದೆ.
ಶೋಧದ ವೇಳೆ ಹಲವಾರು ದೋಷಾರೋಪಣೆಯ ದಾಖಲೆಗಳು ಮತ್ತು ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಡಿ ತಿಳಿಸಿದೆ.
"2011 ರಿಂದ 2023 ರ ಅವಧಿಯಲ್ಲಿ ಕಂಪನಿಯು 28,000 ಕೋಟಿ ರೂ. ಗಳಷ್ಟು (ಅಂದಾಜು) ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು FEMA ಶೋಧದ ವೇಳೆ ಬಹಿರಂಗಪಡಿಸಿದೆ" ಎಂದು ತನಿಖಾ ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಇದೇ ಅವಧಿಯಲ್ಲಿ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಸುಮಾರು ರೂ. 9,754 ಕೋಟಿಗಳನ್ನು ಕಳುಹಿಸಿದೆ ಎಂದು ಅದು ಹೇಳಿದೆ.







