ಬಿಜೆಪಿ ಲಿಂಗಾಯತರನ್ನು ನಿಂದಿಸಿದೆ ಎಂದು ಸ್ವತಃ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಬಿಜೆಪಿ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾಡಿದ ಟೀಕೆಯನ್ನು ತಪ್ಪಾಗಿ ಟ್ವೀಟ್ ಮಾಡಿ ಬಿಜೆಪಿ ಪೇಚಿಗೆ ಸಿಲುಕಿದೆ.
ಬೀದರಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಪ್ರಧಾನಿ ಮೋದಿ ಅವರು, “ನನ್ನನ್ನಷ್ಟೇ ಅಲ್ಲ, ಲಿಂಗಾಯತ ಸಮುದಾಯವನ್ನೂ ಕಾಂಗ್ರೆಸ್ ನಿಂದಿಸಿದೆ. ಲಿಂಗಾಯತರನ್ನು ಕಾಂಗ್ರೆಸ್ ಕಳ್ಳರು ಎಂದು ನಿಂದಿಸಿದೆ” ಎಂದು ಹೇಳಿದ್ದರು.
ಇದನ್ನು ಟ್ವೀಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ಬದಲಿಗೆ 'ಬಿಜೆಪಿ' ಲಿಂಗಾಯತರನ್ನು ನಿಂದಿಸಿದೆ ಎಂದು ಟ್ವೀಟ್ ಮಾಡಿ ಯಡವಟ್ಟು ಮಾಡಿಕೊಂಡಿದೆ. ತಕ್ಷಣವೇ ಈ ಟ್ವೀಟನ್ನು ಬಿಜೆಪಿ ತನ್ನ ಅಧಿಕೃತ ಪೇಜ್ ನಿಂದ ಡಿಲೀಟ್ ಮಾಡಿದೆ. ಅದಾಗ್ಯೂ, ಟ್ವೀಟ್ ನ ಸ್ಕ್ರೀನ್ ಶಾಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟ್ರೋಲಿಗೆ ಗುರಿಯಾಗಿದೆ.
“ಅಪರೂಪಕ್ಕೆ ಒಂದು ಸತ್ಯ ಬರೆದು, ನಂತರ ಡಿಲೀಟ್ ಮಾಡಿಬಿಟ್ಟ ಬಿಜೆಪಿ ಟ್ವಿಟರ್ ಹ್ಯಾಂಡಲ್ ಅಡ್ಮಿನ್. ಅಷ್ಟೊತ್ತಿಗೆ ಸ್ಕ್ರೀನ್ ಶಾಟ್ ಸೇವ್ ಆಗೋಗಿತ್ತು” ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.
"ನನ್ನನ್ನು ಮಾತ್ರವಲ್ಲ, ಲಿಂಗಾಯತ ಸಮುದಾಯವನ್ನೇ ಬಿಜೆಪಿ ನಿಂದಿಸಿತು. ಬಿಜೆಪಿ ಲಿಂಗಾಯಿತರನ್ನು ಕಳ್ಳರೆಂದು ಮೂದಲಿಸಿತು. ಈ ನಿಂದನೆಗೆ ಕರ್ನಾಟಕವು ಮತಗಳ ಮೂಲಕ ಉತ್ತರಿಸುತ್ತದೆ ಎಂಬುದನ್ನು ಕಾಂಗ್ರೆಸ್ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿತ್ತು.
Tweet deleted by @BJP4Karnataka. Costly Typo. pic.twitter.com/OAGPKHoL7P
— Mohammed Zubair (@zoo_bear) April 29, 2023







