ಗುಜರಾತ್: ಕಳೆದ ಐದು ವರ್ಷಗಳಲ್ಲಿ 3,000 ವಿದ್ಯಾರ್ಥಿಗಳು ಆತ್ಮಹತ್ಯೆ
![ಗುಜರಾತ್: ಕಳೆದ ಐದು ವರ್ಷಗಳಲ್ಲಿ 3,000 ವಿದ್ಯಾರ್ಥಿಗಳು ಆತ್ಮಹತ್ಯೆ ಗುಜರಾತ್: ಕಳೆದ ಐದು ವರ್ಷಗಳಲ್ಲಿ 3,000 ವಿದ್ಯಾರ್ಥಿಗಳು ಆತ್ಮಹತ್ಯೆ](https://www.varthabharati.in/sites/default/files/images/articles/2023/04/29/375683-1682772107.jpeg)
ಅಹ್ಮದಾಬಾದ್: ಅಹ್ಮದಾಬಾದ್ನ ಪ್ರತಿಷ್ಠಿತ ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಪ್ಲಾನಿಂಗ್ ಎಂಡ್ ಟೆಕ್ನಾಲಜಿ (ಸಿಇಪಿಟಿ) ಇಲ್ಲಿನ 23 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಶಿಕ್ಷಣ ಸಂಬಂಧಿ ಒತ್ತಡದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಗುಜರಾತ್ ನಲ್ಲಿ ಕಳೆದ ಐದು ವರ್ಷಗಳಲ್ಲಿ 3,002 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಅಂತಿಮ ಸೆಮೆಸ್ಟರ್ ಆರ್ಕಿಟೆಕ್ಚರ್ ವಿದ್ಯಾರ್ಥಿಯಾಗಿದ್ದ ಶಿವ್ ಮಹೇಂದ್ರಭಾಯಿ ಮಿಸ್ತ್ರಿ ಎಂಬ ಈ ವಿದ್ಯಾರ್ಥಿ ವಡೋದರಾ ಮೂಲದವನಾಗಿದ್ದು, ಪಿಜಿಯಲ್ಲಿ ವಾಸವಾಗಿದ್ದ. ಆತ ನಾಲ್ಕು ಸುಸೈಡ್ ನೋಟ್ಗಳನ್ನು ಬರೆದಿಟ್ಟಿದ್ದಾನೆಂದು ಹೇಳಲಾಗಿದೆ. ಆತನ ಹೆತ್ತವರಿಗೆ, ಸೋದರನಿಗೆ, ಪ್ರಿಯತಮೆಗೆ ಹಾಗೂ ಆತ್ಮೀಯ ಸ್ನೇಹಿತನಿಗೆ ತಲಾ ಒಂದು ಸುಸೈಡ್ ನೋಟ್ ಬರೆದಿಟ್ಟಿದ್ದ ಎಂದು ಹೇಳಲಾಗಿದೆ.
ತನ್ನ ಹೆತ್ತವರ ನಿರೀಕ್ಷೆಯನ್ನು ಆತ ತಲುಪಿಲ್ಲ ಹಾಗೂ ತನ್ನ ಜೀವನದ ಗುರಿಯತ್ತ ಸಾಗಲು ಕಷ್ಟಪಡುತ್ತಿದ್ದ, ಈ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಎನ್ಸಿಆರ್ಬಿ ಅಂಕಿಅಂಶಗಳ ಪ್ರಕಾರ ಗುಜರಾತ್ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3,002 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಏಳು ವೈದ್ಯಕೀಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2020, 2021 ಹಾಗೂ 2023 ರಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಜರಾತ್ ಮೂಲದ ಇನ್ನೊಬ್ಬ ವಿದ್ಯಾರ್ಥಿ ದರ್ಶನ್ ಸೋಳಂಕಿ ಇತ್ತೀಚೆಗೆ ಐಐಟಿ-ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಪರಿಗಣಿಸಿದಾಗ ದೇಶದಲ್ಲಿ ಗುಜರಾತ್ ಆರನೇ ಸ್ಥಾನದಲ್ಲಿದೆ.