‘ವಾತ್ಸಲ್ಯ’ ಉಪಶಾಮಕ ಆರೈಕೆ ಘಟಕ ಉದ್ಘಾಟನೆ

ಉಡುಪಿ : ಉಡುಪಿಯ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆ ತನ್ನ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಆರಂಭಿಸಿರುವ ‘ವಾತ್ಸಲ್ಯ’ ಉಪಶಾಮಕ ಆರೈಕೆ ಘಟಕ(ಪ್ಯಾಲೇಟಿವ್ ಕೇರ್ ಯುನಿಟ್)ವನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ರೆ.ಫಾ. ಹೇಮಚಂದ್ರ ಕುಮಾರ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ಯಾನ್ಸರ್ ಮತ್ತು ಸಾವಿನ ಅಂಚಿನಲ್ಲಿರುವ ರೋಗಿಗಳನ್ನು ಮನೆಯಲ್ಲಿ ನೋಡಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಇರುತ್ತದೆ. ಅಂತಹವರಿಗೆ ಆರೈಕೆ ಮಾಡುವ ಉತ್ತಮ ಘಟಕ ಇದಾಗಿದೆ. ಹಿರಿಯ ಜೀವಗಳಿಗೆ ಶ್ರೇಷ್ಠ ತಾಣ. ಇದು ಸೇವೆಯ ಇನ್ನೊಂದು ಭಾಗ. ಜಿಲ್ಲೆಯಲ್ಲಿ ಮಾತ್ರವಲ್ಲ ತಾಲೂಕು ಕೇಂದ್ರಗಳಲ್ಲಿಯೂ ಇಂತಹ ಘಟಕಗಳು ಆರಂಭವಾಗ ಬೇಕಾಗಿದೆ ಎಂದರು. ಆರೈಕೆ ಎಂಬುದು ಬಹಳ ಪ್ರಾಮುಖ್ಯವಾದುದು. ಇಂತಹ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಜೊತೆಗೆ ಸಮಾಲೋಚನೆ, ಆರೈಕೆ ಬಹಳ ಅಗತ್ಯವಾಗಿದೆ. ಈಗ ಮಕ್ಕಳಿಗಿಂತ ವೃದ್ಧರಿಗೆ ಡೇ ಕೇರ್ ಸೆಂಟರ್‌ಗಳ ಅಗತ್ಯ ಹೆಚ್ಚಿದೆ. ಸೇವೆಯ ಇನ್ನೊಂದು ಮುಖವಾಗಿರುವ ವೃದ್ಧರ ಸೇವೆಗೆ ನಮ್ಮ ಸಂಸ್ಥೆಗಳು ತೆರೆದು ಕೊಳ್ಳಬೇಕು ಎಂದು ಅವರು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಎನ್. ಮಾತನಾಡಿ, ವಾತಲ್ಯದ ಕೊರತೆ, ಕ್ಯಾನ್ಸರ್ ಮತ್ತು ಸಾವಿನ ಅಂಚಿನಲ್ಲಿರುವ ರೋಗಿಗಳಿಗೆ ಆರೈಕೆಯ ಹಿನ್ನೆಡೆ, ಚಿಕಿತ್ಸೆ ಸಿಗದ ಕ್ಯಾನ್ಸರ್ ಮತ್ತು ಸಾವಿನ ಅಂಚಿನಲ್ಲಿರುವ ರೋಗಿಗಳಿಗೆ ಇವೆಲ್ಲವೂ ಒಂದೇ ಕಡೆ ಸಿಗುವಂತಹ ಘಟಕ ಇದಾಗಿದೆ. ಇದು ಇಡೀ ದೇಶಕ್ಕೆ ಮಾದರಿ ಯಾಗಿರುವ ಘಟಕ. ದೇಶದ ಎಲ್ಲ ಕಡೆ ಇಂತಹ ಘಟಕ ಅಗತ್ಯವಾಗಿ ಬೇಕು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಮಾತನಾಡಿ, ಈ ಘಟಕವನ್ನು ಸೇವೆಯ ಉದ್ದೇಶದಿಂದ ಮಾಡಿರುವುದೇ ಹೊರತು ಲಾಭಕ್ಕಾಗಿ ಅಲ್ಲ. ಈ ಘಟಕವು ಸಾಮಾನ್ಯ ವಾರ್ಡ್ ಹಾಸಿಗೆಗಳು, ವಿಶೇಷ ಕೊಠಡಿಗಳು ಸೇರಿದಂತೆ ೩೦ ಬೆಡ್‌ಗಳನ್ನು ಹೊಂದಿವೆ. ಚಿಕಿತ್ಸಾ ಕೊಠಡಿ ಮತ್ತು ಭೋಜನಾಲಯವನ್ನು ಒಳಗೊಂಡಿರುವ ಈ ಘಟಕದಲ್ಲಿ ಉಪಶಾಮಕ ಆರೈಕೆ ತಜ್ಞರು, ದಾದಿಯರು, ಫಿಸಿಯೋಥೆರಪಿ ಮತ್ತು ಮಾನಸಿಕ ಆರೋಗ್ಯ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಇದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಣಿಪಾಲ ಕೆಎಂಸಿಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಕಾರ್ತಿಕ್, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ವಿನಯ್ ರಾಜೇಂದ್ರ, ಜಮೀಯ್ಯುತುಲ್ ಫಲಾಹ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಭೀ ಅಹ್ಮದ್ ಖಾಜಿ ಉಪಸ್ಥಿತರಿದ್ದರು. ಧರ್ಮಗುರು ರೆ.ಐವನ್ ಸೋನ್ಸ್ ಪ್ರಾರ್ಥನೆ ನೆರವೇರಿಸಿದರು. ಪಿಆರ್‌ಓ ರೋಹಿ ರತ್ನಾಕರ್ ಸ್ವಾಗತಿಸಿದರು. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್ ವಂದಿಸಿದರು. ಸಿಲೆಸ್ಟನ್ ಸುಸಾನ್ ಕಾರ್ಯಕ್ರಮ ನಿರೂಪಿಸಿದರು.
Next Story