ಐಪಿಎಲ್: ಕೆಕೆಆರ್‌ಗೆ ಸೋಲುಣಿಸಿದ ಗುಜರಾತ್ ಟೈಟಾನ್ಸ್
ವಿಜಯ್ ಶಂಕರ್ ಅರ್ಧಶತಕ

ಕೋಲ್ಕತಾ, ಎ.29: ವಿಜಯ್ ಶಂಕರ್ ಅರ್ಧಶತಕದ ಕೊಡುಗೆಯ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಈಡನ್‌ಗಾರ್ಡನ್ಸ್‌ನಲ್ಲಿ ಶನಿವಾರ ನಡೆದ 39ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 180 ರನ್ ಗುರಿ ಬೆನ್ನಟ್ಟಿದ ಗುಜರಾತ್ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ 17.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿತು.
ಈ ಗೆಲುವಿನ ಮೂಲಕ ಗುಜರಾತ್ ತಂಡ ತಾನಾಡಿದ 8ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಕೆಕೆಆರ್ ತಾನಾಡಿದ 9ನೇ ಪಂದ್ಯದಲ್ಲಿ 6ನೇ ಸೋಲು ಕಂಡಿದೆ.
ವಿಜಯ್ ಶಂಕರ್(ಔಟಾಗದೆ 51 ರನ್, 24 ಎಸೆತ, 2 ಬೌಂಡರಿ, 5 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 32 ರನ್, 18 ಎಸೆತ)4ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಮೊದಲ ವಿಕೆಟಿಗೆ ಸಹಾ(10 ರನ್) ಜೊತೆ 41 ರನ್ ಸೇರಿಸಿದ ಶುಭಮನ್ ಗಿಲ್(49 ರನ್, 35 ಎಸೆತ, 8 ಬೌಂಡರಿ) ನಾಯಕ ಹಾರ್ದಿಕ್ ಪಾಂಡ್ಯ(26 ರನ್, 20 ಎಸೆತ)ಅವರೊಂದಿಗೆ 2ನೇ ವಿಕೆಟಿಗೆ 50 ರನ್ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಕೋಲ್ಕತಾ ನೈಟ್ ರೈಡರ್ಸ್ 179/7: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಅರ್ಧಶತಕದ(81 ರನ್, 39 ಎಸೆತ, 5 ಬೌಂಡರಿ, 7 ಸಿಕ್ಸರ್) ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.
ಎಂದಿನಂತೆ ಜಗದೀಶನ್(19 ರನ್)ಬೇಗನೆ ಔಟಾದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶಾರ್ದೂಲ್ ಠಾಕೂರ್ ಕೂಡ ಶೂನ್ಯಕ್ಕೆ ಔಟಾದರು. ವೆಂಕಟೇಶ್ ಅಯ್ಯರ್(11 ರನ್), ನಾಯಕ ನಿತಿಶ್ ರಾಣಾ(4 ರನ್)ಬೇಗನೆ ವಿಕೆಟ್ ಒಪ್ಪಿಸಿದರು. ಈ ವೇಳೆ ಕೆಕೆಆರ್ ಸ್ಕೋರ್ 88ಕ್ಕೆ 4.
ಆಗ ಅಫ್ಘಾನ್‌ನ ಯುವ ವಿಕೆಟ್‌ಕೀಪರ್-ಬ್ಯಾಟರ್ ಗುರ್ಬಾಝ್ 5ನೇ ವಿಕೆಟಿಗೆ ರಿಂಕು ಸಿಂಗ್(19 ರನ್)ಜೊತೆಗೆ 47 ರನ್ ಸೇರಿಸಿ ತಂಡವನ್ನು ಆಧರಿಸಿದರು. ಬರ್ತ್‌ಡೇ ಬಾಯ್ ಆ್ಯಂಡ್ರೆ ರಸೆಲ್(34 ರನ್, 19 ಎಸೆತ)ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದರು. ಆದಾಗ್ಯೂ ಬಲಿಷ್ಠ ಗುಜರಾತ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲು ಶಕ್ತವಾಯಿತು.
ಗುಜರಾತ್ ಬೌಲಿಂಗ್‌ನಲ್ಲಿ ಮುಹಮ್ಮದ್ ಶಮಿ(3-33)ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ನೂರ್ ಅಹ್ಮದ್(2-21) ಹಾಗೂ ಜೋಶ್ ಲಿಟ್ಲ್(2-25) ತಲಾ ಎರಡು ವಿಕೆಟ್‌ಗಳನ್ನು ಪಡೆದರು.