ಡಬಲ್ ಇಂಜಿನ್ ಸರಕಾರ ವರ್ಸಸ್ ರಿವರ್ಸ್ ಗೇರ್ ಆಡಳಿತ ಸರಕಾರದ ಆಯ್ಕೆ ನಿಮ್ಮದು: ಕಟಪಾಡಿಯಲ್ಲಿ ಅಮಿತ್ ಶಾ

ಉಡುಪಿ, ಎ.29: ರಾಹುಲ್ ಬಾಬಾ ನೇತೃತ್ವದ ರಿವರ್ಸ್ ಗೇರ್ ಆಡಳಿತ ಹಾಗೂ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರಕಾರ; ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸರಕಾರದ ಆಯ್ಕೆ ನಿಮ್ಮದು. ನೀವು ಬುದ್ಧಿವಂತಿಕೆಯಿಂದ ನಿಮ್ಮ ಶಾಸಕರನ್ನು ಆಯ್ಕೆ ಮಾಡುತ್ತೀರೆಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಅಮಿತ್ ಶಾ ಹೇಳಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಗ್ರೀನ್‌ವ್ಯಾಲಿ ಮೈದಾನದಲ್ಲಿ ಇಂದು ನಡೆದ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾ ಅವರು ಈ ವಿಷಯ ತಿಳಿಸಿದರು.
ಕಾಂಗ್ರೆಸ್ ಈಗಲೂ ಓಲೈಕೆ ರಾಜಕೀಯವನ್ನು ಮುಂದುವರಿಸಿದ್ದು, ಈ ಮೂಲಕ ಕರ್ನಾಟಕ ರಾಜ್ಯದ ಸುರಕ್ಷತೆ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಅಮಿತ್ ಶಾ, ಇದಕ್ಕೆ ಮತದಾರರು ಕಾಂಗ್ರೆಸ್‌ನ 70 ವರ್ಷಗಳ ಸುದೀರ್ಘ ಆಡಳಿತ ಹಾಗೂ ಬಿಜೆಪಿಯ 9 ವರ್ಷಗಳ ಆಡಳಿತವನ್ನು ತುಲನೆ ಮಾಡಿ ನೋಡಬಹುದು. ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಇದೀಗ ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆಯ ದೇಶವಾಗುವತ್ತ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.
ಕೇವಲ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಮಾತ್ರ ರಾಜ್ಯಕ್ಕೆ ಮೂಲಭೂತ ಸೌಕರ್ಯಗಳಿರುವ ಅಭಿವೃದ್ಧಿ, ಸುರಕ್ಷತೆ, ಭದ್ರತೆ ಹಾಗೂ ಶಾಂತಿಯನ್ನು ನೀಡಲು ಸಾಧ್ಯ ಎಂದು ಪ್ರತಿಪಾದಿಸಿದ ಅಮಿತ್ ಶಾ, ಬಿಜೆಪಿ ಸರಕಾರದಿಂದ ಮಾತ್ರ ಪಿಎಫ್‌ಐ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಅದರ ಕಾರ್ಯಕರ್ತರ ವಿರುದ್ಧ 92 ಮೊಕದ್ದಮೆಗಳನ್ನು ಹೂಡಲು ಸಾಧ್ಯವಾಗಿದೆ ಎಂದರು.
ನಮಗೆ ಕರ್ನಾಟಕ ಹಾಗೂ ದಕ್ಷಿಣ ಭಾರತದ ಸುರಕ್ಷತೆ ಹಾಗೂ ಅಭಿವೃದ್ಧಿಯೇ ಪ್ರಮುಖ ಆದ್ಯತೆಯಾಗಿದೆ. ನೀವು ಕೇವಲ ಶಾಸಕರು ಅಥವಾ ಸಂಸದರ ಆಯ್ಕೆಗೆ ಮಾತ್ರ ಬಿಜೆಪಿಗೆ ಮತ ನೀಡದೇ, ರಾಜ್ಯದ ಭದ್ರತೆ ಹಾಗೂ ಅಭಿವೃದ್ಧಿಗಾಗಿಯೂ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತಿಕಾರ: ಪ್ರವೀಣ್ ನೆಟ್ಟಾರು ಅವರ ಜೀವವನ್ನು ಮರಳಿ ತರಲು ಬಿಜೆಪಿಗೆ ಸಾಧ್ಯವಿಲ್ಲವಾದರೂ, ಆತನ ಕೊಲೆಗೆ ಸಂಪೂರ್ಣ ಪ್ರತೀಕಾರವನ್ನು ಪಡೆಯಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಮಯದಲ್ಲಿ ಪಿಎಫ್‌ಐ ಕಾರ್ಯಕರ್ತರ ವಿರುದ್ಧದ ಕೇಸನ್ನು ದುರ್ಬಲಗೊಳಿಸಲಾಗಿತ್ತು. ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಏನೂ ಮಾಡಲು ಸಿದ್ಧವಿದೆ ಎಂದು ಆರೋಪಿಸಿದ ಅಮಿತ್ ಶಾ, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಫ್‌ಐನ್ನು ಮತ್ತೆ ವಿಸ್ತರಿಸಲು ಅವಕಾಸ ಮಾಡಿಕೊಡುತ್ತದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಈಗ ತೆಗೆದು ಹಾಕಲಾಗಿರುವ ಮುಸ್ಲಿಂರ ಮೀಸಲಾತಿಯನ್ನು ಬದಲಿಸಲಿದೆ. ಬಿಜೆಪಿ ಮುಸ್ಲಿಂರ ಮೀಸಲಾತಿಯನ್ನು ರದ್ದುಪಡಿಸಿ, ಒಕ್ಕಲಿಗ, ಲಿಂಗಾಯಿತ, ಎಸ್‌ಸಿ ಹಾಗೂ ಎಸ್‌ಟಿಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ಅಲ್ಲದೇ ಕಾಂಗ್ರೆಸ್‌ನ ಏಕೈಕ ಗುರಿ ರಾಜವಂಶ (ನೆಹರೂ ಪರಿವಾರ) ಆಡಳಿತವನ್ನು ಮುಂದುವರಿಸುವುದಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಾದ್ಯಂತ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಭಾರತ ಇಂದು ಮೊಬೈಲ್ ಉತ್ಪಾದನೆಯನ್ನು ವಿಶ್ವದಲ್ಲೇ ಎರಡನೇ ಸ್ಥಾನ, ಅಟೋಮೊಬೈಲ್ ಕ್ಷೇತ್ರದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನ, ಸಾರ್ಟ್‌ಅಪ್‌ನಲ್ಲಿ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಮೂರನೇ ಸ್ಥಾನ, ಮರುಬಳಕೆ ಇಂಧನ ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.
ಕರ್ನಾಟಕಕ್ಕೆ 2.26 ಲಕ್ಷ ಕೋಟಿ ನೆರವು: ಕೇಂದ್ರ ಸರಕಾರದ ನೆರವಿನೊಂದಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಾದ ಅಭಿವೃದ್ಧಿ ಕಾರ್ಯಗಳ ಸುದೀರ್ಘ ಪಟ್ಟಿಯನ್ನು ಓದಿದ ಅಮಿತ್ ಶಾ, ಈ ಅವಧಿಯಲ್ಲಿ ರಾಜ್ಯಕ್ಕೆ ಒಟ್ಟು 2,26,418 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಲೆಕ್ಕ ಒಪ್ಪಿಸಿದರು. ರಾಜ್ಯದ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಯಲು ಆಮದು ಅಡಿಕೆ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದೆ. ರಾಜ್ಯಾದ್ಯಂತ ಎಲ್ಲಾ ಸಂಪರ್ಕ ರಸ್ತೆಗಳನ್ನು ಎಂದರು.
ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ನ ಯಾವುದೇ ಅಭ್ಯರ್ಥಿ ಜಯಗಳಿಸದಂತೆ ನೋಡಿಕೊಳ್ಳಿ ಎಂದು ಬಿಜೆಪಿ ಮತದಾರರಿಗೆ ಕರೆ ನೀಡಿದ ಅಮಿತ್ ಶಾ, ರಾಹುಲ್ ಹಾಗೂ ಪ್ರಿಯಾಂಕ ರಾಜ್ಯದಲ್ಲಿ ಚುನಾವಣಾ ಪ್ರವಾಸೋದ್ಯಮ ದಲ್ಲಿ ಆಸಕ್ತರಾಗಿದ್ದಾರೆ. ಅವರು ರಾಜ್ಯವನ್ನು ಎಟಿಎಂ ಆಗಿ ಬಳಸಿಕೊಳ್ಳಲು ಬಯಸಿದ್ದಾರೆ ಎಂದರು.
ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಕಾರ್ಯಕ್ರಮವನ್ನು ತೀವ್ರವಾಗಿ ಟೀಕಿಸಿದ ಕೇಂದ್ರ ಗೃಹ ಸಚಿವರು, ಉ.ಪ್ರ, ಮಣಿಪುರ, ತ್ರಿಪುರಗಳಲ್ಲಿ ಇವರ ಗ್ಯಾರಂಟಿ ಯಾವುದೇ ಪರಿಣಾಮ ಬೀರದೇ ಪಕ್ಷದ ಅಸ್ತಿತ್ವವೇ ನಿರ್ನಾಮವಾಗಿ ಎಂದು ಲೇವಡಿ ಮಾಡಿದರು.
ಸಭೆಯಲ್ಲಿ ಬಿಜೆಪಿ ಉಡುಪಿ ಅಭ್ಯರ್ಥಿ ಯಶಪಾಲ್ ಸುವರ್ಣ, ಕಾಪು ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅಲ್ಲದೇ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ದಿಲ್ಲಿ ಶಾಸಕ ವಿಜಯೇಂದ್ರ ಗುಪ್ತ, ಮಂಗಳೂರಿನ ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










