ಉಡುಪಿ: ಅಂಚೆ ಮತದಾನ ದಿನದಂದು ಅಧಿಕಾರಿ, ಸಿಬ್ಬಂದಿ, ಕಾರ್ಮಿಕರಿಗೆ ವೇತನ ಸಹಿತ ರಜೆ

ಉಡುಪಿ, ಎ.29: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೇಂದ್ರ ಚುನಾವಣಾ ಆಯೋಗವು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ವನ್ನು ಕಲ್ಪಿಸಿದೆ.
ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಗೈರುಹಾಜರಿ ಮತದಾರರಿಗೆ ಮತದಾನ ಮಾಡಲು ಅನುಕೂಲ ವಾಗುವಂತೆ ಪೋಸ್ಟಲ್ ವೋಟಿಂಗ್ ಸೆಂಟರ್‌ನ್ನು ಜಿಲ್ಲೆಯಲ್ಲಿ ಏಕ ಮಾದರಿಯಾಗಿ ಮೇ 2ರಿಂದ 4 ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆಯಲಾಗುವುದು.
ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿಗದಿ ಪಡಿಸಿದ ದಿನಾಂಕಗಳಂದು ಮತದಾನ ಮಾಡಲು ತೆರಳಿದ ದಿನದಂದು ವೇತನ ಸಹಿತ ರಜೆ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿ ಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾನದ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ
ಉಡುಪಿ : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಮೇ10ರಂದು ಚುನಾವಣೆ ನಿಗದಿಪಡಿಸಿದ್ದು, ಈ ದಿನದಂದು ಜಿಲ್ಲೆಯಾದ್ಯಂತ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲಕರು, 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ)ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ ಕಾಯ್ದೆ-1963 ಕಲಂ 3(ಎ) ಅನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಿಸಿ, ಮತ ಚಲಾಯಿಸಲು ಅನುವು ಮಾಡಿ ಕೊಡಬೇಕು.
ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.