ಗಲ್ವಾನ್ ಸಂಘರ್ಷದ ಹುತಾತ್ಮ ಯೋಧನ ಪತ್ನಿ ಲೆಫ್ಟಿನೆಂಟ್ ಆಗಿ ಸೇನೆಗೆ ನಿಯೋಜನೆ

ಹೊಸದಿಲ್ಲಿ,ಎ.29: 2020ರಲ್ಲಿ ನಡೆದ ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ನಾಯ್ಕಾ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಅವರನ್ನು ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಗಿದೆ.
ರೇಖಾ ಸಿಂಗ್ ಅವರನ್ನು ಪೂರ್ವ ಲಡಾಕ್ ನ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಮುಂಚೂಣಿ ನೆಲೆಯಲ್ಲಿ ನಿಯೋಜಿಸಲಾಗಿದೆಯೆಂದು ಸೇನಾಮೂಲಗಳು ಶನಿವಾರ ತಿಳಿಸಿವೆ. ಅವರು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡಮಿ (ಓಟಿಎ)ಯಲ್ಲಿ ಒಂದು ವರ್ಷದ ತರಬೇತಿ ಪೂರ್ಣಗೊಳಿಸಿದ್ದರು.
ರೇಖಾ ಸಿಂಗ್ ಅವರ ಪತಿ ನಾಯ್ಕ್ ದೀಪಕ್ ಸಿಂಗ್ ಬಿಹಾರ್ ರೆಜಿಮೆಂಟ್ ನ 16ನೇ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗಲ್ವಾನ್ ಕಣಿವೆಯಲ್ಲಿ ಗಡಿಅತಿಕ್ರಮಣ ನಡೆಸಿದ ಚೀನಿ ಸೈನಿಕರ ಜೊತೆ ನಡೆದ ಸಂಘರ್ಷದಲ್ಲಿ ದೀಪಕ್ ಸಿಂಗ್ ಅವರ ಪರಮೋನ್ನತ ಬಲಿದಾನಕ್ಕಾಗಿ ಅವರಿಗೆ 2021ರಲ್ಲಿ ಮರಣೋತ್ತರ ವೀರ ಚಕ್ರ ಪುರಸ್ಕಾರವನ್ನು ನೀಡಲಾಗಿದೆ.
Next Story





