ಭಾರತೀಯ ಸೇನಾ ಇತಿಹಾಸದಲ್ಲೇ ಮೊದಲ ಬಾರಿ ಐವರು ಮಹಿಳಾ ಸೇನಾಧಿಕಾರಿಗಳು ಫಿರಂಗಿದಳಕ್ಕೆ ನಿಯೋಜನೆ

ಹೊಸದಿಲ್ಲಿ,ಎ.29: ಭಾರತದ ಸೇನಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಐವರು ಮಹಿಳಾ ಸೇನಾಧಿಕಾರಿಗಳನ್ನು ತನ್ನ ಫಿರಂಗಿದಳಕ್ಕೆ (ಆರ್ಟಿಲರಿ) ಶನಿವಾರ ನಿಯೋಜಿಸಿದೆ.
ಚೆನ್ನೈನ ಆಧಿಕಾರಿಗಳ ತರಬೇತಿ ಅಕಾಡಮಿ (ಓಟಿಎ)ಯಲ್ಲಿ ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಮಹಿಳಾ ಅಧಿಕಾರಿಗಳು ಆರ್ಟಿಲರಿ ರೆಜಿಮೆಂಟ್ಗೆ ನಿಯೋಜಿಸಲ್ಪಟ್ಟಿದ್ದಾರೆ.
ಲೆ.ಮೇಹಕ್ ಸೈನಿ, ಲೆ. ಸಾಕ್ಷಿ ದುಬೆ, ಲೆ. ಆದಿತಿ ಯಾದವ್ ಹಾಗೂ ಲೆ. ಪಿಯೂಸ್ ಮುದ್ಗಿಲ್ ಫಿರಂಗಿದಳಕ್ಕೆ ಸೇರ್ಪಡೆಗೊಂಡ ಮಹಿಳಾ ಸೇನಾಧಿಕಾರಿಗಳಾಗಿದ್ದಾರೆ.
ಈ ಐವರು ಮಹಿಳಾ ಸೇನಾಧಿಕಾರಿಗಳ ಪೈಕಿ ಮೂವರನ್ನು ಚೀನಾದ ಜೊತೆಗಿನ ಗಡಿರೇಖೆಯುದ್ದಕ್ಕೂ ಇರುವ ಸೇನಾಘಟಕಗಳಲ್ಲಿ ನಿಯೋಜನೆಗೊಳಿಸಲಾಗಿದ್ದರೆ, ಇನ್ನಿಬ್ಬರು ಪಾಕಿಸ್ತಾನ ಜೊತೆಗಿನ ಗಡಿಮುಂಚೂಣಿಯಲ್ಲಿರುವ ಸವಾಲುದಾಯಕ ಸ್ಥಳಗಳಲ್ಲಿ ನಿಯುಕ್ತಿಗೊಂಡಿದ್ದಾರೆ.
ಜನವರಿಯಲ್ಲಿ, ಸೇನಾ ಪಡೆಗಳ ವರಿಷ್ಠ ಜ. ಮನೋಜ್ ಪಾಂಡೆ ಅವರು ಸೇನೆಯಫಿರಂಗಿ ತುಕಡಿಗಳಲ್ಲಿ ಮಹಿಳೆಯನ್ನು ನಿಯೋಜಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಈ ಪ್ರಸ್ತಾವನೆಯನ್ನು ಸರಕಾರವು ಅಂಗೀಕರಿಸಿತ್ತು.







