ಶಾಸಕ ಝಮೀರ್ ಅಹ್ಮದ್ ವಿರುದ್ಧ ಲೋಕಾಯುಕ್ತ ತನಿಖೆಗೆ ಸುಪ್ರೀಂ ತಡೆ

ಹೊಸದಿಲ್ಲಿ: ಆದಾಯ ಮೂಲಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅವರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಝಮೀರ್ ಅಹ್ಮದ್ ಖಾನ್ ಅವರು 87.5 ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದು, ಅವರ ನಿಗದಿತ ಆದಾಯ ಮೂಲಕ್ಕಿಂತ ಶೇ 2,031ರಷ್ಟು ಹೆಚ್ಚಿದೆ ಎಂದು ಲೋಕಾಯುಕ್ತ ಪೊಲೀಸರು 2022ರಲ್ಲಿ ಎಫ್‍ಐಆರ್ ದಾಖಲು ಮಾಡಿದ್ದರು. ಆನಂತರ, ನಿಗದಿತ ಆದಾಯ ಮೀರಿದ ಆಸ್ತಿಯನ್ನು ಹೊಂದಿರುವ ಪ್ರಕರಣದಲ್ಲಿ ತನಿಖೆಗೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್ ಎ.6ರಂದು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಝಮೀರ್ ಅಹ್ಮದ್ ಖಾನ್ ಮೇಲ್ಮನವಿ ಸಲ್ಲಿಸಿದ್ದರು.
ಝಮೀರ್ ಅಹ್ಮದ್ ಖಾನ್ ಪರ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿ.ರಾಮಸುಬ್ರಹ್ಮಣಿಯನ್ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠವು ಈ ಸಂಬಂಧ ಮಧ್ಯಂತರ ಆದೇಶ ನೀಡಿದೆ. ಎರಡು ವಾರದ ಬಳಿಕ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲು ತೀರ್ಮಾನಿಸಿದ ಪೀಠವು, ಈ ಸಂಬಂಧ ರಾಜ್ಯ ಸರಕಾರ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದೆ.





