ಕುಂದಾಪುರ: ಕಿರಣ್ ಕೊಡ್ಗಿ ಪರ ಶೋಭಾ ಕರಂದ್ಲಾಜೆ ಪ್ರಚಾರ

ಕುಂದಾಪುರ, ಎ.29: ಮೋದಿ, ಬಿಜೆಪಿ ಎಂದರೆ ಅಭಿವೃದ್ಧಿ ಎಂಬುದು ಜನರಿಗೆ ಅರಿವಾಗಿದೆ. ಕಾಂಗ್ರೆಸ್ ಅಲೆ ಕೊಚ್ಚಿಹೋಗಿದೆ. ವಾರೆಂಟಿಯಿಲ್ಲದ ಗ್ಯಾರೆಂಟಿ ಕಾರ್ಡ್ ಮಾತ್ರ ಅವರ ಬದುಕು. ಇಂತಹ ಪೊಳ್ಳು ಭಾಷಣಕ್ಕೆ ಯಾರು ಮರಳಾಗುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಪರ ಪ್ರಚಾರ ಸಂಬಂಧ ಸಂಗಮ್ ಸಮೀಪ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು. ದಿಲ್ಲಿಯಿಂದ ಹಳ್ಳಿ ತನಕ ಕಾಂಗ್ರೆಸ್ ಸರಕಾರವಿದ್ದಾಗ ಜನರಿಗೆ ಉಪಯೋಗವಾಗುವ ಅಭಿವೃದ್ಧಿ ಕೆಲಸ ಮಾಡಿಲ್ಲ. 10 ವರ್ಷದಲ್ಲಿ ಮನಮೋಹನ್ ಸಿಂಗ್ ಸರಕಾರ ಮಾಡಿದ್ದೇನು ಎಂಬುದನ್ನು ಜನರಿಗೆ ತಿಳಿಸಲಿ ಎಂದವರು ಹೇಳಿದರು.
ಹಿಂದೆ ರಾಜ್ಯದಲ್ಲೂ ಆಡಳಿತಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ, ಶಾದಿ ಭಾಗ್ಯದ ಮೂಲಕ ಸಮಾಜ ಒಡೆಯು ವುದು, ಧರ್ಮ ಒಡೆಯುವುದು ಮಾಡಿದ್ದಾರೆ. ಒಂದು ಸಮುದಾಯದ ಓಲೈಕೆ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ಕಂಡುಬರುತ್ತಿದೆ. ರಾಜ್ಯ- ಕೇಂದ್ರದ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಮೋದಿ ಅವರ ಕೈ ಬಲಪಡಿಸುವ ಕಾರ್ಯವಾಗಬೇಕಿದೆ. ರಾಜ್ಯದಲ್ಲಿ 130ಕ್ಕೂ ಅಧಿಕ ಶಾಸಕರು ಬಿಜೆಪಿಯಿಂದ ಗೆಲ್ಲುವ ವಿಶ್ವಾಸವಿದೆ. ಅಭಿವೃದ್ಧಿ ಸರ್ಕಾರದ ಅಗತ್ಯತೆ ಬಗ್ಗೆ ಜನರಿಗೆ ಒಲವಿದೆ. ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ಶೋಭಾ ಕಣಿ ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಮುಖಂಡರಾದ ಶ್ಯಾಮಲಾ ಕುಂದರ್, ಮೋಹನದಾಸ್ ಶೆಣೈ, ಕಾಡೂರು ಸುರೇಶ್ ಶೆಟ್ಟಿ, ಭಾಸ್ಕರ್ ಪುತ್ರನ್ ಇದ್ದರು.







