ಮೃತಪಟ್ಟ ವಿಚ್ಛೇದಿತ ಪುತ್ರಿಯ ಬಾಕಿ ಜೀವನಾಂಶ ಪಡೆಯಲು ತಾಯಿ ಅರ್ಹಳು: ಮದ್ರಾಸ್ ಹೈಕೋರ್ಟ್

ಚೆನ್ನೈ,ಎ.29: ವಿಚ್ಛೇದಿತ ಮಹಿಳೆಯ ತಾಯಿಯು ತನ್ನ ಪುತ್ರಿಯ ಜೀವನಾಂಶದ ಬಾಕಿ ಹಣವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾಳೆ ಎಂದು ಮದ್ರಾಸ್ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ.
ತಾನು ವಿವಾಹವಿಚ್ಛೇದನ ನೀಡಿದ್ದ ಮಹಿಳೆಗೆ ಪರಿಹಾರಧನವಾಗಿ ಕೊಡಬೇಕಾಗಿದ್ದ 6.37 ಲಕ್ಷ ರೂ. ಬಾಕಿ ಹಣವನ್ನು ಪಡೆಯು ಹಕ್ಕು ಆಕೆಯ ತಾಯಿಗಿಲ್ಲವೆಂದು ವಾದಿಸಿ, ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು.
ಸರಸ್ವತಿ ಎಂಬವರು ಅರ್ಜಿದಾರ ಅಣ್ಣಾದೊರೈ ಅವರನ್ನು 1991ರಲ್ಲಿ ವಿವಾಹವಾಗಿದ್ದರು. ಆನಂತರ ಅವರು ಪ್ರತ್ಯೇಕಗೊಂಡರು. ಅಣ್ಣಾದೊರೈ ಅವರು ಚೆಯ್ಯೂರ್ ಸಬ್ ಕೋರ್ಟ್ ನಲ್ಲಿ ವಿಚ್ಚೇದನದ ಅರ್ಜಿಯನ್ನು ಸಲ್ಲಿಸಿದ್ದರು. 2005ರ ಜನವರಿ 20ರಲ್ಲಿ ವಿಚ್ಛೇದನದ ಆದೇಶವನ್ನು ಪಡೆದರು. ತನ್ನ ಪತಿಯಿಂದ ಜೀವನಾಂಶ ಕೋರಿ ಸರಸ್ವತಿ ಮದುರಾತಂಗಂ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಳು. ಆಕೆಗೆ ಮಾಸಿಕವಾಗಿ 7500 ರೂ. ಪರಿಹಾರಧನ ನೀಡುವಂತೆ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿತ್ತು. 2021ರಲ್ಲಿ ಸರಸ್ವತಿ, ತನಗೆ 6.37 ಲಕ್ಷ ರೂ. ಪರಿಹಾರಧನವನ್ನು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಕೂಡಾ ಆಕೆಯ ಪರವಾಗಿ ತೀರ್ಪು ನೀಡಿತ್ತು. ಈನಡುವೆ ಸರಸ್ವತಿ 2021ರ ಜೂನ್ 5ರಂದು ಕೊನೆಯುಸಿರೆಳೆದರು. ತರುವಾಯ ಆಕೆಯ ತಾಯಿ ಜಯಾ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿ, ಮೃತ ಪುತ್ರಿಯ ಬರಲು ಬಾಕಿಯುಳಿದಿರುವ ಜೀವಾನಾಂಶವನ್ನು ವಸೂಲಿ ಮಾಡಲು ತನಗೆ ಅನುಮತಿ ನೀಡಬೇಕೆಂದು ಕೋರಿದ್ದರು.
ಈ ತೀರ್ಪನ್ನು ಪ್ರಶ್ನಿಸಿ ಮದುರಾತಂಗಂ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶಿವನಾಯಗಂ ಅವರು ಹಿಂದೂ ಉತ್ತರಾಧಿಕಾರ ಕಾಯ್ದೆಯ ನಿಯಮಾವಳಿಗಳ ಪ್ರಕಾರ,ಪುತ್ರಿಗೆ ನೀಡಲು ಬಾಕಿಯಿದ್ದ ಪರಿಹಾರಧನಕ್ಕೆ ಆಕೆಯ ತಾಯಿಯು , ಸಾವಿನವರೆಗೂ ಹಕ್ಕುದಾರಳಾಗಿರುತ್ತಾಳೆ ಎಂದು ತೀರ್ಪು ನೀಡಿದ್ದಾರೆ.





