ಬಾಹ್ಯಾಕಾಶ ನಡಿಗೆ ಪೂರ್ಣಗೊಳಿಸಿದ ಅರಬ್ ಗಗನಯಾತ್ರಿ ಸುಲ್ತಾನ್ ಅಲ್-ನೆಯಾದಿ

ದುಬಾಯಿ, ಎ.29: ಯುಎಇಯ ಗಗನಯಾತ್ರಿ ಸುಲ್ತಾನ್ ಅಲ್-ನೆಯಾದಿ ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸಿದ ಮೊದಲ ಅರಬ್ ಗಗನಯಾತ್ರಿ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬಂದ ಅವರು ಬಾಹ್ಯಾಕಾಶದ ನಿರ್ವಾತದಲ್ಲಿ 7.01 ಗಂಟೆಯಲ್ಲಿ ತಮ್ಮ ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸಿದರು.
ಮಾರ್ಚ್ 2ರಂದು 6 ಸದಸ್ಯರ ತಂಡದೊಂದಿಗೆ ಅಮೆರಿಕದ ಫ್ಲೋರಿಡಾದಿಂದ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದ ಸುಲ್ತಾನ್ ಅಲ್-ನೆಯಾದಿ ಸುಮಾರು 2 ತಿಂಗಳು ಬಾಹ್ಯಾಕಾಶದಲ್ಲಿ ಕಳೆದಿದ್ದು ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. `ನಾಸಾ'ದ ಇಂಜಿನಿಯರ್ ಸ್ಟೀಫನ್ ಬೊವೆನ್ ಜತೆ ಅವರು ನಡೆಸಿರುವ ಬಾಹ್ಯಾಕಾಶ ನಡಿಗೆಯು 2 ಪ್ರಮುಖ ಉದ್ದೇಶಗಳನ್ನು ಹೊಂದಿದೆ.
ಬಾಹ್ಯಾಕಾಶ ನಡಿಗೆಗೆ ಮುಂಚಿತವಾಗಿ, ಗಗನಯಾತ್ರಿಗಳ ಸುರಕ್ಷತೆಯನ್ನು ಖಚಿತಪಡಿಸಲು ಸಂಪೂರ್ಣ ತಪಾಸಣೆ ನಡೆಸಲಾಯಿತು. ಬಾಹ್ಯಾಕಾಶ ನಿಲ್ದಾಣದ ಹೊರಗೆ ಸುಲ್ತಾನ್ ಅಲ್-ನೆಯಾದಿ ಮತ್ತು ಬೊವೆನ್ ವಿಕಿರಣ ಮತ್ತು ವಿಪರೀತ ತಾಪಮಾನದ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.