ಅಗಾಧ ಸಾಲದ ಒತ್ತಡದ ದೇಶಗಳಲ್ಲಿ ಪಾಕಿಸ್ತಾನಕ್ಕೆ 15ನೇ ಸ್ಥಾನ

ಇಸ್ಲಮಾಬಾದ್, ಎ.29: ಅಗಾಧ ಸಾಲದ ಒತ್ತಡವಿರುವ ದೇಶಗಳ ಜಾಗತಿಕ ಪಟ್ಟಿಯಲ್ಲಿ ಪಾಕಿಸ್ತಾನ 15ನೇ ಸ್ಥಾನದಲ್ಲಿದೆ ಎಂದು `ಬ್ಯುಸಿನೆಸ್ ರೆಕಾರ್ಡರ್' ವರದಿ ಮಾಡಿದೆ.
ಬಾಹ್ಯ ಸಾಲದ ಹೊರತಾಗಿ, ಸೆಂಟ್ರಲ್ ಬ್ಯಾಂಕ್ ನ ಅಧಿಕ ಬಡ್ಡಿದರ ನೀತಿಯಿಂದಾಗಿ ಸರಕಾರಕ್ಕೆ ದೇಶೀಯ ಎರವಲು ವೆಚ್ಚವೂ ಅಧಿಕ ಹೊರೆಯಾಗುತ್ತಿದೆ. ಎರವಲು ವೆಚ್ಚ(ಸಾಲದ ಬಡ್ಡಿದರ ಇತ್ಯಾದಿ) ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
2024ರ ವರ್ಷಕ್ಕೆ ಪಾಕಿಸ್ತಾನಕ್ಕೆ ಸುಮಾರು 40 ಶತಕೋಟಿ ಡಾಲರ್ನಷ್ಟು ಬಾಹ್ಯ ಹಣಕಾಸು ಅಗತ್ಯವಿದೆ. ಇದೇ ವೇಳೆ ಬಡ್ಡಿಪಾವತಿ ಸೇರಿ ಪಾಕಿಸ್ತಾನದ ಬಾಹ್ಯ ಸಾಲ ಮರುಪಾವತಿಯ ಮೊತ್ತ ಸುಮಾರು 30 ಶತಕೋಟಿ ಡಾಲರ್ನಷ್ಟಾಗಿದೆ. ಆದ್ದರಿಂದ ಪಾಕಿಸ್ತಾನದ ಚಾಲ್ತಿಖಾತೆ(ಕರೆಂಟ್ ಅಕೌಂಟ್) ಕೊರತೆಯು ಗಮನಾರ್ಹವಾಗಿ ಕ್ಷೀಣಿಸುತ್ತಿದೆ. ನಾವು ಎಲ್ಲಾ ಹಂತಗಳಲ್ಲಿ ನಮ್ಮ ಖರ್ಚುಗಳನ್ನು ಕಡಿಮೆ ಮಾಡಬೇಕು ಮತ್ತು ಪ್ರತೀ ವ್ಯವಹಾರದಲ್ಲೂ ಸರಳತೆಯನ್ನು ಪಾಲಿಸಬೇಕಾಗಿದೆ ಎಂದು ಹಣಕಾಸು ಮತ್ತು ಆರ್ಥಿಕ ವಿಶ್ಲೇಷಕ ಅತೀಖ್ ರಹ್ಮಾನ್ ಹೇಳಿದ್ದಾರೆ.
ಜೂನ್ 2023ರ ನಂತರ ಪಾಕಿಸ್ತಾನದ ಹಣಕಾಸು ಆಯ್ಕೆಗಳು ಹೆಚ್ಚು ಕಠಿಣ ಮತ್ತು ಅನಿಶ್ಚಿತವಾಗಿವೆ. ಅಧಿಕ ಸಾಲದ ಒತ್ತಡ ಎದುರಿಸುತ್ತಿರುವ ಕಡಿಮೆ ಆದಾಯದ ದೇಶಗಳ ಸಾಲಿನಲ್ಲಿ ಮತ್ತು ಅಧಿಕ ಬಡ್ಡಿಪಾವತಿಸಿ ಸಾಲ ಪಡೆಯುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಇರಿಸಬಹುದು ಎಂದು `ಬ್ಯುಸಿನೆಸ್ ರೆಕಾರ್ಡರ್' ವರದಿ ಹೇಳಿದೆ.