ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್‌ಗೆ ರೋಚಕ ಜಯ
ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸನ್ ಅರ್ಧಶತಕ, ಮಾರ್ಷ್, ಸಾಲ್ಟ್ ಹೋರಾಟ ವ್ಯರ್ಥ

ಹೊಸದಿಲ್ಲಿ, ಎ.29: ಮಿಚೆಲ್ ಮಾರ್ಷ್(63 ರನ್, 39 ಎಸೆತ)ಹಾಗೂ ಫಿಲ್ ಸಾಲ್ಟ್(59 ರನ್, 35 ಎಸೆತ)ಅರ್ಧಶತಕದ ಕೊಡುಗೆಯ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 9 ರನ್ ಅಂತರದಿಂದ ಸೋಲುಂಡಿದೆ.
ಶನಿವಾರ ನಡೆದ 40ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(67 ರನ್, 36 ಎಸೆತ,12 ಬೌಂಡರಿ, 1 ಸಿಕ್ಸರ್) ಹಾಗೂ ಹೆನ್ರಿಕ್ ಕ್ಲಾಸನ್(ಔಟಾಗದೆ 53 ರನ್, 27 ಎಸೆತ, 2 ಬೌಂಡರಿ, 4 ಸಿಕ್ಸರ್)ಅರ್ಧಶತಕದ ಕೊಡುಗೆಯ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಿತು.
ಗೆಲ್ಲಲು 198 ರನ್ ಗುರಿ ಪಡೆದ ಡೆಲ್ಲಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.
ಮಿಚೆಲ್ ಮಾರ್ಷ್(63 ರನ್, 39 ಎಸೆತ)ಹಾಗೂ ಫಿಲ್ ಸಾಲ್ಟ್(59 ರನ್, 35 ಎಸೆತ)2ನೇ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿದ ಹೊರತಾಗಿಯೂ ಡೆಲ್ಲಿ ತಂಡ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟಿಂಗ್ ಕುಸಿತಕ್ಕೆ ಒಳಗಾಯಿತು. ನಾಯಕ ಡೇವಿಡ್ ವಾರ್ನರ್(0) ಮೊದಲ ಓವರ್‌ನ 2ನೇ ಎಸೆತದಲ್ಲೇ ಔಟಾದರು. ಅಕ್ಷರ್ ಪಟೇಲ್ (ಔಟಾಗದೆ 29ರನ್) ಹಾಗೂ ರಿಪಾಲ್ ಪಟೇಲ್(ಔಟಾಗದೆ 11)40 ರನ್ ಜೊತೆಯಾಟ ನಡೆಸಿದರೂ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರು.
ಹೈದರಾಬಾದ್ ಪರ ಮಯಾಂಕ್ ಮರ್ಕಂಡೆ(2-20)ಎರಡು ವಿಕೆಟ್ ಪಡೆದರು.
ಹೈದರಾಬಾದ್ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್(5 ರನ್), ನಾಯಕ ಮರ್ಕ್ರಮ್(8 ರನ್), ಹ್ಯಾರಿ ಬ್ರೂಕ್(0) ಹಾಗೂ ರಾಹುಲ್ ತ್ರಿಪಾಠಿ(10) ವೈಫಲ್ಯ ಕಂಡರು. ಅಭಿಷೇಕ್ ಅವರು ನಾಯಕ ಮರ್ಕ್ರಮ್ ಜೊತೆಗೆ 3ನೇ ವಿಕೆಟ್‌ಗೆ 39 ರನ್ ಸೇರಿಸಿ ತಂಡವು ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳಲು ನೆರವಾದರು.
ಅಬ್ದುಲ್ ಸಮದ್(28 ರನ್, 21 ಎಸೆತ)ಅವರೊಂದಿಗೆ 6ನೇ ವಿಕೆಟಿಗೆ 53 ರನ್ ಹಾಗೂ ಅಕೀಲ್ ಹುಸೈನ್(ಔಟಾಗದೆ 16 ರನ್, 10 ಎಸೆತ)ಅವರೊಂದಿಗೆ 7ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 35 ರನ್ ಸೇರಿಸಿದ ಕ್ಲಾಸನ್ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು.
ಆತಿಥೇಯ ಡೆಲ್ಲಿಯ ಪರ ಮಿಚೆಲ್ ಮಾರ್ಷ್(4-27)ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಅಕ್ಷರ್ ಪಟೇಲ್(1-29) ಹಾಗೂ ಇಶಾಂತ್ ಶರ್ಮಾ(1-31) ತಲಾ ಒಂದು ವಿಕೆಟ್ ಪಡೆದರು.