ಕಲ್ಲೇಟು ತಿಂದಿರುವ ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ: ಕುಮಾರಸ್ವಾಮಿಗೆ ಪರಮೇಶ್ವರ್ ತಿರುಗೇಟು

ತುಮಕೂರು: ಕಲ್ಲೇಟು ತಿಂದಿರುವ ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ, ಜನರ ಮುಂದೆ ಹೋಗುತ್ತೇನೆ, ಜನರ ತೀರ್ಮಾನ ತೆಗೆದುಕೊಳ್ಳುತ್ತೇನೆ, ಸೋಲು, ಗೆಲುವು ನೋಡಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಮುಂದೆ ಹೋಗಿ ಅಳುವ ಡ್ರಾಮಾ ಮಾಡುವ ಅವಶ್ಯಕತೆ ನನಗೆ ಇಲ್ಲ, ಡ್ರಾಮಾ ಮಾಡಿ ಚುನಾವಣೆಗೆ ಸ್ಪರ್ಧಿಸಬೇಕೆಂಬ ಇರಾದೆ ನನಗೆ ಇಲ್ಲ, ಏಟು ಬಿದ್ದಿರೋದು ನನಗೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬಹುದು ಎಂದು ತಿರುಗೇಟು ನೀಡಿದರು.
ನನ್ನ 35 ವರ್ಷದ ರಾಜಕೀಯದಲ್ಲಿ ಶತ್ರುಗಳು ಕಡಿಮೆ, ಚುನಾವಣೆ ಜನರ ತೀರ್ಪು, ಜನರ ಮುಂದೆ ಮತ ಕೇಳ್ತೀವಿ, ಆಶ್ವಾಸನೆ ಕೊಡ್ತೀವಿ ಅದನ್ನ ಬಿಟ್ಟು ಬೇರೆ ಮಾಡಬಾರದು, ದ್ವೇಷ ತಿರಿಸಿಕೊಳ್ಳುವುದಕ್ಕೆ ಸಾರ್ವಜನಿಕ ಜೀವನ ಬಳಸಿಕೊಳ್ಳಬಾರದು. ಕೊರಟಗೆರೆಯ ಜನರು ಸಹ ಯಾರು ಉದ್ವೇಗಕ್ಕೆ ಒಳಗಾಗಬೇಡಿ, ಶಾಂತಿಯುತವಾಗಿ ಚುನಾವಣೆ ನಡೆಯಬೇಕು ಎಂದು ಮನವಿ ಮಾಡಿದರು.
1999ರಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡುವಾಗ ನನಗೆ ಚಾಕುವಿನಿಂದ ತಿವಿಯಲು ಪ್ರಯತ್ನಿಸಿದ್ದರು, ಈಗ ಮತ್ತೆ ಅಂತಹ ಪ್ರಯತ್ನ ಆಗಿದೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಕರಣದ ಬಗ್ಗೆ ದೂರು ನೀಡಿದ್ದಾರೆ, ಪೊಲೀಸರು ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರು.
ನನಗೆ ಕಲ್ಲೇಟು ಬಿದ್ದಿರುವ ವಿಚಾರದಲ್ಲಿ ಭದ್ರತಾ ವೈಫಲ್ಯ ಆಗಿಲ್ಲ ಎಂದ ಅವರು, ಕಲ್ಲು ಹೊಡೆದ ತಕ್ಷಣ ಹೆದರುವ ಜಾಯಮಾನ ನನ್ನದಲ್ಲ, ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ, ವೈದ್ಯರು ಒಪ್ಪಿಗೆ ಕೊಟ್ಟರೆ ನಾಳೆಯಿಂದಲೇ ಪ್ರಚಾರದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಹೂವಿನಿಂದ ಕಲ್ಲು ಬಿದ್ದಿಲ್ಲ: ಬೈರೇನಹಳ್ಳಿ ಕ್ರಾಸ್‍ನಲ್ಲಿ ಪ್ರಚಾರದ ವೇಳೆ 1,500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು, ಜೆಸಿಬಿ ಮೂಲಕ ಹಾರ, ಹೂ ಹಾಕುವಾಗ ತಲೆಗೆ ಏನೋ ಹೊಡ್ದಂಗೆ ಆಯ್ತು, ಗುಲಾಬಿ ಜೊತೆ ರಕ್ತ ಬರ್ತಾ ಇದ್ದಿದ್ದು ಗೊತ್ತಾಗಲಿಲ್ಲ ಎಂದು ಘಟನೆ ಬಗ್ಗೆ ವಿವರಿಸಿದರು.
ತಲೆಯಿಂದ ರಕ್ತ ಚಿಮ್ಮುತ್ತಿದ್ದನ್ನು ಕಂಡು ಕಾರ್ಯಕರ್ತರು ಕೆಳಗೆ ಇಳಿಸಿ ನನ್ನನ್ನು ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಡಾ.ತಮೀಮ್ ಜೊತೆಯಲ್ಲಿಯೇ ಇದ್ದಿದ್ದರಿಂದ ನನಗೆ ಚಿಕಿತ್ಸೆ ನೀಡಿದರು, ಪ್ರಥಮ ಚಿಕಿತ್ಸೆ ಪಡೆದ ನಂತರ ಮನೆಗೆ ಬಂದು ವಿಶ್ರಾಂತಿ ಪಡೆದೆ ಎಂದು ಹೇಳಿದರು.
ಘಟನೆಯಲ್ಲಿ ಕಲ್ಲು ಎಲ್ಲಿಂದ ಬಂತು, ಯಾರು ಎಸೆದವರು, ಇಟ್ಟವರು ಗೊತ್ತಿಲ್ಲ, ನನಗೆ ಗೊತ್ತಿರುವಂತೆ ಕಲ್ಲು ಹೂವಿನಿಂದ ಬಂದಿಲ್ಲ, ಜೆಸಿಬಿ ಮೇಲಿಂದ ಹೂವ ಎಸೆಯೋರಿಗೆ ಕಲ್ಲು ಇದ್ದಿದ್ದರೆ ಗೊತ್ತಾಗುತ್ತಿತ್ತು, ಯಾರೋ ದುಷ್ಕರ್ಮಿಗಳು ಮಾಡಿದ್ದಾರೆ, ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಬ್ಲ್ಯೂ ಹಾಕಿ ಚಿಕಿತ್ಸೆ ನೀಡಲಾಗಿದೆ ಎಂದರು.
ಘಟನೆ ನಡದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಬೇಡಿ ಎಂದು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೆಂದ್ರ ಮಹಾಸ್ವಾಮೀಜಿ ಸೇರಿದಂತೆ ಅನೇಕರು ಮಠಾಧೀಶರು, ಸಾಹಿತಿಗಳು ಮತ್ತು ಹೋರಾಟಗಾರರು ದೂರವಾಣಿ ಕರೆ ಮಾಡಿ,ಆರೋಗ್ಯ ವಿಚಾರಿಸಿದರು. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಕಲ್ಲೆಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪರಮೇಶ್ವರ ಅವರು ನಿವಾಸಕ್ಕೆ ರಾಮಕೃಷ್ಣ ಮಠದ ಶ್ರೀ ವಿರೇಶಾನಂದ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಮಹಾಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು, ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ರಾಜಣ್ಣ, ಷಡಕ್ಷರಿ, ಇಕ್ಬಾಲ್ ಅಹಮ್ಮದ್, ಗ್ರಾಮಾಂತರ ಅಭ್ಯರ್ಥಿ ಷಣ್ಮಖಪ್ಪ ಮುಂತಾದವರು ಡಾ.ಪರಮೇಶ್ವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.







