ಕುಸ್ತಿಪಟುಗಳ ಪ್ರತಿಭಟನೆಯನ್ನು ದುರ್ಬಲಗೊಳಿಸದಂತೆ ಸೋದರ ಸಂಬಂಧಿ ಬಬಿತಾಗೆ ತಾಕೀತು ಮಾಡಿದ ವಿನೇಶ್ ಫೋಗಟ್
ಹೊಸದಿಲ್ಲಿ: ಸೋದರ ಸಂಬಂಧಿಗಳಾದ ವಿನೇಶ್ ಫೋಗಟ್ ಹಾಗೂ ಬಬಿತಾ ಫೋಗಟ್ ನಡುವೆ ವಾಕ್ಸಮರ ಸ್ಫೋಟಗೊಂಡಿದ್ದು, ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ದುರ್ಬಲಗೊಳಿಸದಂತೆ ವಿನೇಶ್ ಫೋಗಟ್, ಬಬಿತಾ ಫೋಗಟ್ಗೆ ತಾಕೀತು ಮಾಡಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ಅಪರಾಧ ಪ್ರಚೋದನೆ ಆರೋಪ ಎದುರಿಸುತ್ತಿರುವ ಬೃಜ್ ಭೂಷಣ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೇಶದ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪುನಿಯಾ ಕಳೆದ ರವಿವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಬಿತಾರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ವಿನೇಶ್ ಫೋಗಟ್, "ನೀವು ದೌರ್ಜನ್ಯಕ್ಕೊಳಗಾದ ಮಹಿಳಾ ಕುಸ್ತಿ ಪಟುಗಳ ಹಕ್ಕಿನ ಪರವಾಗಿ ನಿಲ್ಲದಿದ್ದರೂ ಪರವಾಗಿಲ್ಲ. ಆದರೆ, ಬಬಿತಾ ಸಹೋದರಿ, ನಮ್ಮ ಹೋರಾಟವನ್ನು ದುರ್ಬಲಗೊಳಿಸದಿರಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತೇನೆ. ತಮಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಮಾತನಾಡಲು ಮಹಿಳಾ ಕುಸ್ತಿ ಪಟುಗಳಿಗೆ ವರ್ಷಗಳೇ ಆಗಿವೆ. ನೀವೂ ಕೂಡಾ ಓರ್ವ ಮಹಿಳೆಯೇ ಆಗಿದ್ದು, ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ" ಎಂದು ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಭೇಟಿ ಮಾಡಲು ಜಂತರ್ ಮಂತರ್ಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕುರಿತು ಬಬಿತಾ ಟ್ವೀಟ್ ಮಾಡಿದ್ದರು.
ಆ ಟ್ವೀಟ್ನಲ್ಲಿ "ಮಹಿಳಾ ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸಲು ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಆಪ್ತ ಸಹಾಯಕ ಸಂದೀಪ್ ಸಿಂಗ್ನೊಂದಿಗೆ ಜಂತರ್ ಮಂತರ್ ತಲುಪಿದ್ದಾರೆ. ಆದರೆ, ಈ ವ್ಯಕ್ತಿಯೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಹಾಗೂ ದಲಿತ ಮಹಿಳೆಗೆ ಅಪಮಾನಿಸಿದ ಆರೋಪ ಹೊಂದಿದ್ದಾನೆ" ಎಂದು ಕಳೆದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಬಬಿತಾ ವ್ಯಂಗ್ಯವಾಡಿದ್ದರು.
ಈ ನಡುವೆ ದಿಲ್ಲಿ ಪೊಲೀಸರು, ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿ ಪಟುಗಳು ಹೊರಿಸಿದ್ದ ಆರೋಪದ ಸಂಬಂಧ ಎರಡು ಪ್ರಾಥಮಿಕ ಮಾಹಿತಿ ವರದಿಗಳನ್ನು ದಾಖಲಿಸಿಕೊಂಡಿದ್ದಾರೆ.
ಮೊದಲ ಪ್ರಾಥಮಿಕ ವರದಿಯಲ್ಲಿ ಅಪ್ರಾಪ್ತ ಮಹಿಳಾ ಕುಸ್ತಿ ಪಟು ನೀಡಿರುವ ದೂರನ್ನು ಆಧರಿಸಿ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಘನತೆಗೆ ಕುಂದುಂಟು ಮಾಡಿದ ಆರೋಪವನ್ನು ದಾಖಲಿಸಿಕೊಳ್ಳಲಾಗಿದೆ.
ಎರಡನೆಯ ಪ್ರಾಥಮಿಕ ವರದಿಯಲ್ಲಿ ವಯಸ್ಕ ಕುಸ್ತಿಪಟುಗಳು ನೀಡಿರುವ ದೂರುಗಳನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ವಿವಿಧ ಪ್ರಸ್ತುತ ಸೆಕ್ಷನ್ಗಳಡಿ ಘನತೆಗೆ ಕುಂದುಂಟು ಮಾಡಿದ ಆರೋಪವನ್ನು ದಾಖಲಿಸಿಕೊಳ್ಳಲಾಗಿದೆ.