ಕಲ್ಲಂದಡ್ಕದಲ್ಲಿ ಮತದಾನ ಬಹಿಷ್ಕಾರ: ಮನವೊಲಿಸಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ

ಪುತ್ತೂರು: ತಾಲೂಕಿನ ಕಬಕ ಗ್ರಾಮದ ಕಲ್ಲಂದಡ್ಕ ನಿವಾಸಿಗಳು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು ಈ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದರು. ರವಿವಾರ ಕಲ್ಲಂದಡ್ಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಮತದಾನ ಬಹಿಷ್ಕಾರ ಮಾಡದಂತೆ ಅವರ ಮನವೊಲಿಸಿದರು.
ಈ ಭಾಗದಲ್ಲಿ ಅನೇಕ ಮನೆಗಳಿದ್ದು ರಸ್ತೆ ಇಲ್ಲ, ಸಮರ್ಪಕ ಕುಡಿಯುವ ನೀರು ಹಾಗೂ ದಾರಿ ದೀಪದ ವ್ಯವಸ್ಥೆ ಈ ಪ್ರದೇಶದಲ್ಲಿಲ್ಲ. ನಾವು ಅನೇಕ ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದ್ದರೂ ಯಾರೂ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಈ ವೇಳೆ ನೋವು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್ ರೈಯವರು ನೀವು ಮತದಾನ ಮಾಡದೆ ಇರುವುದು ತಪ್ಪಾಗುತ್ತದೆ. ಸಂವಿಧಾನ ನಮಗೆ ಕೊಟ್ಟ ಅವಕಾಶವನ್ನು ಬಲಿ ಕೊಡಬೇಡಿ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಎಲ್ಲಾ ಕಡೆಗಳಲ್ಲೂ ಸಮಸ್ಯೆಗಳಿದೆ ಇದಕ್ಕೆಲ್ಲಾ ಪರಿಹಾರ ಸಾಧ್ಯವಿದೆ, ಕಾಂಗ್ರೆಸ್ ಶಾಸಕರು ಗೆದ್ದು ಬರುವಲ್ಲಿ ಸಹಕರಿಸಿ ಎಂದು ಅಶೋಕ್ ರೈ ವಿನಂತಿಸಿದರು. ಅಶೋಕ್ ರೈಯವರ ವಿನಂತಿ ಬಳಿಕ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಾಗಿ ಗ್ರಾಮಸ್ಥರು ತಿಳಿಸಿದರು.
ಈ ವೇಳೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ ಮತ್ತಿತರರು ಉಪಸ್ಥಿತರಿದ್ದರು.